ಪ್ರತಾಪಗಢ, ರಾಜಸ್ಥಾನ:ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಕಚೋಟಿಯಾ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಪ್ರತಾಪಗಢ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಾ.ಇಂದರ್ಜಿತ್ ಯಾದವ್ ಮತ್ತು ಎಸ್ಪಿ ಅಮಿತ್ ಕುಮಾರ್ ಜಿಲ್ಲಾಸ್ಪತ್ರೆಗೆ ತರಳಿ, ವೈದ್ಯರೊಂದಿಗೆ ಮಾತನಾಡಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಿದರು.
ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ಶನಿ ಅಮಾವಾಸ್ಯೆಯಂದು ಸನ್ವಾರಿಯಾ ಜೀ ಮತ್ತು ಶನಿ ಮಹಾರಾಜರ ದರ್ಶನಕ್ಕಾಗಿ 41 ಜನರೊಂದಿಗೆ ನಮ್ಮ ಗ್ರಾಮದಿಂದ ಹೊರಟಿದ್ದೆವು ಎಂದು ಲಂಬಾಬ್ರಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀವನ್‌ಲಾಲ್ ತಿಳಿಸಿದ್ದಾರೆ.
ಗ್ರಾಮದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 56ರಲ್ಲಿ ನಮ್ಮ ಬಸ್ ಓವರ್ ಟೇಕ್ ಮಾಡಲು ಯತ್ನಿಸುತ್ತಿತ್ತು. ಈ ವೇಳೆ, ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಟ್ರೈಲರ್ಗೆ ನಾವು ಸಂಚರಿಸುತ್ತಿದ್ದ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಎಲ್ಲ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 41 ಜನರು ಪ್ರಯಾಣಿಸುತ್ತಿದ್ದೆವು ಎಂದು ಜೀವನ್‌ಲಾಲ್ ಹೇಳಿದರು.