ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಚಿಂಗ್ ಕೇಂದ್ರವಾದ ಕೋಟಾ ಜಿಲ್ಲೆಯಲ್ಲಿ ಮತ್ತೊಮ್ಮ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳ ಮೂಲದ 19 ವರ್ಷದ ಫೌರಿದ್ ಹುಸೇನ್ ಸಾವಿಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಇದರೊಂದಿಗೆ ಕೋಟಾದಲ್ಲಿ ಒಂದು ತಿಂಗಳ ನಂತರ ಮತ್ತೆ ವಿದ್ಯಾರ್ಥಿಯ ಸಾವಿನ ಘಟನೆ ವರದಿಯಾಗಿದೆ.
ಐಐಟಿ, ನೀಟ್ ಸೇರಿದಂತೆ ಹಲವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ಗೆ ಕೋಟಾ ಹೆಸರು ಪಡೆದಿದೆ. ಇದೀಗ ಕಳೆದ ಕೆಲವು ತಿಂಗಳಿಂದ ಆಕಾಂಕ್ಷಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ದೀಪಾವಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಹೋಗಿ ವಾಪಸ್ ಬಂದ್ಮೇಲೆ ಮತ್ತೆ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಸೋಮವಾರ ಈ ವಿದ್ಯಾರ್ಥಿಯ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಸಿಯುರಾ ನಲ್ಹಾಟಿ ಜಿಲ್ಲೆಯ ಬಿರ್ಭುಮ್ ನಿವಾಸಿಯಾದ ಫೌರಿದ್ ಹುಸೇನ್, ಒಂದು ವರ್ಷದಿಂದ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ಗೆ ತಯಾರಿ ನಡೆಸುತ್ತಿದ್ದ. ಇಲ್ಲಿನ ವಕ್ಫ್ ನಗರ ಪ್ರದೇಶದ ಮನೆಯೊಂದರಲ್ಲಿ ಬಾಡಿಗೆ ಇದ್ದ. ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದಾದಾಬರಿ ಪೊಲೀಸ್ ಠಾಣಾಧಿಕಾರಿ ರಾಜೇಶ್ ಪಾಠಕ್ ತಿಳಿಸಿದ್ದಾರೆ.