ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಂಕಾ ಕಾರ್ಯವೈಖರಿಯ ಬಗ್ಗೆ ಕ್ರೀಡಾ ಸಚಿವ ಅಶೋಕ್ ಚಂದನ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಅಗೌರವದ ಸಚಿವ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೇಳಿಕೊಂಡಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಶೋಕ್ ಚಂದನ, 'ಗೌರವಾನ್ವಿತ ಮುಖ್ಯಮಂತ್ರಿಗಳು ನನ್ನನ್ನು ಈ ಅಗೌರವದ ಸಚಿವ ಸ್ಥಾನದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡುತ್ತಿದ್ದೇನೆ. ನನ್ನ ಇಲಾಖೆಯ ಉಸ್ತುವಾರಿಯನ್ನು ಕುಲದೀಪ್ ರಂಕಾ ಜೀಗೆ ನೀಡಿ. ಹೇಗೂ ಅವರೇ ಎಲ್ಲಾ ಇಲಾಖೆಗಳನ್ನು ಹೊಂದಿದ್ದಾರೆ. ಅವರು ಎಲ್ಲಾ ಇಲಾಖೆಗಳ ಸಚಿವರು ಕೂಡಾ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದ್ದು, ಪಕ್ಷದೊಳಗಿನ ಅಸಮಾಧಾನ ಹೊರಬಿದ್ದಿದೆ. ಕಳೆದ ಒಂದು ವಾರದ ಹಿಂದಷ್ಟೇ ಡುಂಗರ್‌ಪುರದ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ, ತಮ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಗೆಹ್ಲೋಟ್ಗೆ ರಾಜೀನಾಮೆ ಕಳುಹಿಸಿದ್ದರು.