ರಾಯ್‌ಪುರ:ಛತ್ತೀಸ್ಗಢ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವರ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದನ್ನೇ ಬಳಸಿಕೊಂಡ ಸಿಎಂ ಬಘೇಲಾ ಅವರು ಸರ್ಕಾರದ ಸಾಧನೆಯ ಬಗ್ಗೆ ಮಾತನಾಡುತ್ತಿದ್ದಾಗ, ರೊಚ್ಚಿಗೆದ್ದ ವಿಪಕ್ಷಗಳು ಅರ್ಧದಲ್ಲೇ ಸಭಾತ್ಯಾಗ ಮಾಡಿದರು. ಇದರಿಂದ ಗೊತ್ತುವಳಿಗೆ ಸೋಲಾಯಿತು.
ಛತ್ತೀಸ್ಗಢದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಜನರು ಸಮಸ್ಯೆಗೀಡಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಇದಕ್ಕೆ ಸಿಎಂ ಉತ್ತರ ನೀಡುವ ವೇಳೆ ತೀವ್ರ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳು ಭಾಷಣ ಪೂರ್ಣಗೊಳಿಸಲು ಬಿಡದೇ ಸಭಾತ್ಯಾಗ ಮಾಡಿದರು. ಹೀಗಾಗಿ ಪ್ರತಿಪಕ್ಷಗಳು ತಂದಿದ್ದ ಅವಿಶ್ವಾಸ ಗೊತ್ತುವಳಿ ತಿರಸ್ಕೃತಗೊಂಡಿದೆ.
ಮಾತು ಮುಂದುವರಿಸಿದ ಸಿಎಂ ಬಘೇಲಾ ಅವರು, ವಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಅವಕಾಶ ನೀಡಿದಂತಾಗಿದೆ. ಇದಕ್ಕೆ ವಿಪಕ್ಷಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಮದು ಅವರು ಹೇಳಿದರು.
ಸತ್ಯಾಂಶಗಳಿಲ್ಲದ ಅವಿಶ್ವಾಸ ನಿರ್ಣಯ:ವಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಅಪನಂಬಿಕೆ ವ್ಯಕ್ತಪಡಿಸುವ ಹಕ್ಕಿದೆ. ಆಡಳಿತಾರೂಢ ಪಕ್ಷಕ್ಕೂ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಅವಕಾಶವಿದೆ. ಅವರು 109 ಆರೋಪಗಳನ್ನು ಮಾಡಿದರು. ಆದರೆ, ಅವುಗಳಿಗೆ ಯಾವುದೇ ಆಧಾರವನ್ನು ನೀಡಲಿಲ್ಲ. ಈ ಹಿಂದೆ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ನಕ್ಸಲೀಯರ ಸಮಸ್ಯೆಯೇ ಮೊದಲು ಚರ್ಚೆಯಾಗುತ್ತಿತ್ತು. ಈ ಬಾರಿ ಅದಾಗಲಿಲ್ಲ. ಇದೇ ಅಲ್ಲವೆ ನಮ್ಮ ಸಾಧನೆ ಎಂದು ಅವರು ಹೇಳಿದರು.