ರಾಮನಾಥಪುರಂ, ತಮಿಳುನಾಡು :ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಗುರುವಾರ ಎರಡು ಗಂಟೆಗೂ ಹೆಚ್ಚು ಕಾಲ ಎಡೆಬಿಡದೇ ಸುರಿದ ಮಳೆಯಿಂದಾಗಿ ಮಳೆ ನೀರು ನುಗ್ಗಿದೆ. ಗುರುವಾರ ಬೆಳಗ್ಗೆ ರಾಮೇಶ್ವರಂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದೆ. ಇದರಿಂದ ಪ್ರಸಿದ್ಧ ರಾಮನಾಥಸ್ವಾಮಿ ದೇವಸ್ಥಾನದ ಮೂರನೇ ‘ಪ್ರಾಕಾರ’ದಲ್ಲಿ ಮಳೆ ನೀರು ನಿಂತು ಅಸ್ತವ್ಯಸ್ತವಾಗಿತ್ತು. ಇದರಿಂದ ದೇಗುಲದ ಆವರಣದೊಳಗೆ ಜಲಾವೃತಗೊಂಡಿದ್ದು, ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ಮಳೆನೀರಿನಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಮನಾಥಸ್ವಾಮಿ ದೇಗುಲದಲ್ಲಿ ಮಳೆನೀರಿನ ಸಮಸ್ಯೆ ಕೆಲ ದಿನಗಳಿಂದ ತಲೆದೋರಿತ್ತು. ಮುಂದಿನ ದಿನಗಳಲ್ಲಿ ದೇವಸ್ಥಾನದ ಒಳಗೆ ಮಳೆ ನೀರು ಶೇಖರಣೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕು. ಭಾರಿ ಮಳೆಯ ಸಮಯದಲ್ಲಿ ದೇವಾಲಯದ ಒಳ ಆವರಣವು ಜಲಾವೃತವಾಗದಂತೆ ನಿರ್ವಹಣೆ ಮತ್ತು ಪ್ಲಗ್ ಸೋರಿಕೆಯನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಕ್ತರು ಒತ್ತಾಯಿಸಿದರು.
ರಾಮನಾಥಸ್ವಾಮಿ ದೇವಾಲಯವು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ತಮಿಳುನಾಡಿನ ರಾಮೇಶ್ವರಂನಲ್ಲಿದೆ. ಈ ದೇವಸ್ಥಾನಕ್ಕೆ ಪ್ರತಿನಿತ್ಯ ಜಿಲ್ಲೆ ಮತ್ತು ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.