ಕರ್ನಾಟಕ

karnataka

ETV Bharat / bharat

ಹಿರಿಯ ನಾಗರಿಕರಿಗೆ ಟಿಕೆಟ್ ರಿಯಾಯಿತಿ ಸ್ಥಗಿತ; ರೈಲ್ವೆಗೆ ₹2,242 ಕೋಟಿ ಹೆಚ್ಚುವರಿ ಆದಾಯ - ರೈಲ್ವೆಗೆ 2242 ಕೋಟಿ ಹೆಚ್ಚುವರಿ ಆದಾಯ

ಹಿರಿಯ ನಾಗರಿಕರಿಗೆ ಟಿಕೆಟ್ ರಿಯಾಯಿತಿ ರದ್ಧತಿ ಕುರಿತು ಮಧ್ಯಪ್ರದೇಶದ ಚಂದ್ರಶೇಖರ್ ಗೌರವ್ ಎಂಬವರು ರೈಲ್ವೆ ಆಡಳಿತ ವಿಭಾಗಕ್ಕೆ ಆರ್​ಟಿಐ ಮೂಲಕ ಮಾಹಿತಿ ಕೋರಿದ್ದರು.

train
ರೈಲು

By

Published : May 2, 2023, 9:48 AM IST

ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ನೀಡುತ್ತಿದ್ದ ರಿಯಾಯಿತಿ ರದ್ದುಗೊಂಡಿದ್ದರಿಂದ 2022-23ನೇ ಸಾಲಿನಲ್ಲಿ 2,242 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬಂದಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಏಪ್ರಿಲ್ 1, 2022 ಮತ್ತು ಮಾರ್ಚ್ 31, 2023ರ ನಡುವೆ ಸುಮಾರು 8 ಕೋಟಿ ಹಿರಿಯ ನಾಗರಿಕರಿಗೆ ರಿಯಾಯಿತಿ ಟಿಕೆಟ್ ನೀಡಿಲ್ಲ. ಪ್ರಸಕ್ತ ವರ್ಷದಲ್ಲಿ 4.6 ಕೋಟಿ ಹಿರಿಯ ಪುರುಷರು, 3.3 ಕೋಟಿ ಹಿರಿಯ ಮಹಿಳೆಯರು ಮತ್ತು 18,000 ತೃತೀಯ ಲಿಂಗಿಗಳು ಪ್ರಯಾಣಿಸಿದ್ದರು ಎಂದು ರೈಲ್ವೆ ಆಡಳಿತ ವಿಭಾಗ ತಿಳಿಸಿದೆ. ಈ ಅವಧಿಯಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಂದ ಬಂದ ಒಟ್ಟು ಆದಾಯ 5,062 ಕೋಟಿ ರೂ.ಗಳಾಗಿದ್ದು, ರಿಯಾಯಿತಿ ರದ್ದುಗೊಳಿಸಿದ್ದರಿಂದ 2,242 ಕೋಟಿ ರೂ ಹೆಚ್ಚುವರಿ ಹಣ ಗಳಿಕೆಯಾಗಿದೆ ಎಂದು ಹೇಳಿದೆ.

ಹಿರಿಯ ನಾಗರಿಕರ ರಿಯಾಯಿತಿ ಟಿಕೆಟ್ ರದ್ದುಗೊಂಡಿದ್ದರಿಂದ ರೈಲ್ವೆ ಗಳಿಕೆಯು ಸ್ಥಿರವಾದ ವೇಗದಲ್ಲಿ ಹೆಚ್ಚಾಗಿದೆ. ಮಾರ್ಚ್ 20, 2020 ಮತ್ತು ಮಾರ್ಚ್ 31, 2022 ರ ನಡುವೆ ರೈಲ್ವೆಯು 7.31 ಕೋಟಿ ಹಿರಿಯ ನಾಗರಿಕ ಪ್ರಯಾಣಿಕರಿಗೆ ರಿಯಾಯಿತಿ ನೀಡಿಲ್ಲ. ಈ ಪೈಕಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 4.46 ಕೋಟಿ ಪುರುಷ ಪ್ರಯಾಣಿಕರು, 58 ವರ್ಷ ಮೇಲ್ಪಟ್ಟ 2.84 ಕೋಟಿ ಮಹಿಳಾ ಪ್ರಯಾಣಿಕರು ಮತ್ತು 8,310 ತೃತೀಯ ಲಿಂಗಿಗಳು ಸೇರಿದ್ದಾರೆ.

2020-22ರ ಅವಧಿಯಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಂದ ಬಂದ ಒಟ್ಟು ಆದಾಯವು 3,464 ಕೋಟಿ ರೂ.ಗಳಾಗಿತ್ತು. 2022-23ರ ಹಣಕಾಸು ವರ್ಷದಲ್ಲಿ ರೈಲ್ವೆಯು ಪುರುಷ ಹಿರಿಯ ನಾಗರಿಕ ಪ್ರಯಾಣಿಕರಿಂದ 2,891 ಕೋಟಿ ರೂ., ಮಹಿಳಾ ಪ್ರಯಾಣಿಕರಿಂದ 2,169 ಕೋಟಿ ರೂ. ಮತ್ತು ಟ್ರಾನ್ಸ್‌ಜೆಂಡರ್‌ಗಳಿಂದ 1.03 ಕೋಟಿ ರೂ. ಆದಾಯ ಬಂದಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ರೈಲು ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು 20 ಮಾರ್ಚ್ 2020 ರಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿತ್ತು. 2020ರಲ್ಲಿ ಕೋವಿಡ್ ಹರಡುವಿಕೆ ತಡೆಗೆ ಪ್ರಯಾಣದ ಮೇಲೆ ಕಡಿವಾಣ ಹಾಕಲು ಹಲವು ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಅದರೊಂದಿಗೆ ಹಿರಿಯ ನಾಗರಿಕರಿಗೆ ನೀಡಿದ್ದ ರಿಯಾಯಿತಿಗಳನ್ನು ಸಹ ಕೇಂದ್ರವು ಬಂದ್ ಮಾಡಿತ್ತು.

ಹಿರಿಯ ನಾಗರಿಕರಿಗೆ ರಿಯಾಯಿತಿ ಎಷ್ಟಿತ್ತು?:ಕೋವಿಡ್ ಮೊದಲು ಭಾರತೀಯ ರೈಲ್ವೆ ವಿಭಾಗವು ತನ್ನ ರೈಲುಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರ ಟಿಕೆಟ್‌ ದರಗಳಲ್ಲಿ ಶೇ 50 ರಷ್ಟು ರಿಯಾಯಿತಿ ನೀಡುತ್ತಿತ್ತು. 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಿರಿಯ ನಾಗರಿಕರ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತಿತ್ತು.

ರೈಲ್ವೆ ಇಲಾಖೆಯು ರಾಜಧಾನಿ, ಶತಾಬ್ದಿ, ದುರಂತೋ ಸೇರಿದಂತೆ ಎಲ್ಲ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪುರುಷರಿಗೆ ಮೂಲ ದರದಲ್ಲಿ ಶೇ 40 ಮತ್ತು ಮಹಿಳೆಯರಿಗೆ ಮೂಲ ದರದಲ್ಲಿ ಶೇ 50 ದಷ್ಟು ರಿಯಾಯಿತಿ ನೀಡುತ್ತಿತ್ತು. ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ 2020 ಮಾರ್ಚ್‌ನಿಂದ ಹಿಡಿದು ಇಲ್ಲಿಯವರೆಗೆ ಹಿರಿಯ ನಾಗರಿಕರಿಗೆ ಟಿಕೆಟ್ ದರ ರಿಯಾಯಿತಿ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.

ಎರಡು ದಶಕಗಳಲ್ಲಿ ರೈಲ್ವೆ ರಿಯಾಯಿತಿ ಬಹು ಚರ್ಚಿತ ವಿಷಯವಾಗಿದೆ. ಹಲವು ಸಮಿತಿಗಳು ಟಿಕೆಟ್ ರಿಯಾಯಿತಿ ದರ ಕೈಬಿಡುವಂತೆ ಸೂಚಿಸಿದ್ದವು. ಅದರ ನಡುವೆಯೂ ಜುಲೈ 2016 ರಲ್ಲಿ ರೈಲ್ವೆ ವಿಭಾಗವು ಹಿರಿಯ ನಾಗರಿಕರಿಗೆ ರಿಯಾಯಿತಿ ಘೋಷಿಸಿತ್ತು. ಪ್ರಯಾಣಿಕರಿಗೆ ನೀಡುತ್ತಿದ್ದ ಅಂದಾಜು 53 ವಿಧದ ರಿಯಾಯಿತಿಗಳಿಂದ ಪ್ರತಿ ವರ್ಷ ಸುಮಾರು 2,000 ಕೋಟಿ ರೂಪಾಯಿಗಳ ಬೃಹತ್ ನಷ್ಟವನ್ನು ರೈಲ್ವೆ ವಿಭಾಗ ಭರಿಸಬೇಕಿತ್ತು. ಹಿರಿಯ ನಾಗರಿಕರಿಗೆ ರೈಲ್ವೆ ವಿಭಾಗವು ನೀಡುವ ಒಟ್ಟು ರಿಯಾಯಿತಿ ಶೇಕಡಾ 80 ರಷ್ಟಿದೆ. ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಅರ್ಜಿದಾರರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ಇದನ್ನೂಓದಿ:ಚುನಾವಣಾ ಅಕ್ರಮ: ಈವರೆಗೆ 309 ಕೋಟಿ ರೂ.ಮೌಲ್ಯದ ವಸ್ತುಗಳು ಜಪ್ತಿ

ABOUT THE AUTHOR

...view details