ಬಾಲಸೋರ್ (ಒಡಿಶಾ):ಒಡಿಶಾ ತ್ರಿವಳಿ ರೈಲು ದುರಂತಕ್ಕೆ ಕಾರಣ ಮತ್ತು ಅದಕ್ಕೆ ಕಾರಣವಾದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ (ಹಳಿ ಬದಲಿಸುವ ವ್ಯವಸ್ಥೆ) ಸಮಸ್ಯೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಹಳಿಗಳ ಮರುಜೋಡಣೆ ಕಾರ್ಯದಿಂದ ಭರದಿಂದ ಸಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಭಾನುವಾರ ಘಟನಾ ಸ್ಥಳವನ್ನು ಪುನರ್ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಘಟನೆಯಲ್ಲಿ 288 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದು, ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಲಾಗಿದೆ. ತನಿಖೆಯ ಪೂರ್ಣ ವರದಿ ಬಂದ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬುಧವಾರದಿಂದ ರೈಲು ಮರು ಸಂಚಾರ:ಇಂಟರ್ಲಾಕಿಂಗ್ ಸಿಸ್ಟಮ್ ವೇಳೆ ರೈಲು ಹಳಿ ತಪ್ಪಿ ಗೂಡ್ಸ್ ರೈಲಿಗೆ ಗುದ್ದಿದೆ. ಎದುರಿನಿಂದ ಬಂದ ಹೌರಾ ರೈಲು ಮತ್ತೊಮ್ಮೆ ಡಿಕ್ಕಿಯಾಗಿದೆ. ಇದರಿಂದ ದುರಂತ ಸಂಭವಿಸಿದೆ. ಹಳಿ ತಪ್ಪಲು ಕಾರಣ ಏನೆಂಬುದರ ಬಗ್ಗೆ ಶೀಘ್ರವೇ ವರದಿ ಬರಲಿದೆ. ಪುನರ್ ಸಂಚಾರಕ್ಕಾಗಿ ಹಾಳಾದ ಹಳಿಗಳನ್ನು ಪುನರ್ಜೋಡಣೆಯ ಕಾರ್ಯ ನಡೆಸಲಾಗುತ್ತಿದೆ. ಬುಧವಾರದಿಂದ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.
ರೈಲ್ವೆ ಸಚಿವ ವೈಷ್ಣವ್ ಅವರು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಅಪಘಾತ ಸ್ಥಳದಲ್ಲಿದ್ದು, ಭರದಿಂದ ನಡೆಯುತ್ತಿರುವ ಹಳಿಗಳ ಮರು ಜೋಡಣೆ ಕಾರ್ಯವನ್ನು ಪರಿಶೀಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರತಿಯೊಂದು ಕೋನದಿಂದ ತನಿಖೆ ನಡೆಸಲು ಸೂಚನೆಗಳನ್ನು ನೀಡಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಧಾನಿ ಭರವಸೆ ಕೊಟ್ಟಿದ್ದರು.
ಆರೋಗ್ಯ ಸಚಿವರಿಂದ ಪರಿಶೀಲನೆ:ಇದೇ ವೇಳೆ ಘಟನೆಯಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಭುವನೇಶ್ವರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು. ಹೆಚ್ಚಿನ ನೆರವು ಬೇಕಾದಲ್ಲಿ ಕೇಂದ್ರಕ್ಕೆ ಆರೋಗ್ಯ ಇಲಾಖೆಗೆ ಮನವಿ ಮಾಡುವಂತೆಯೂ ತಿಳಿಸಿದ್ದಾರೆ.
ದುರಂತ ಹೀಗೆ ನಡೆಯಿತು..:ಜೂನ್ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿದೆ. ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿದೆ. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 288 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ 'ಶಾಸ್ತ್ರಿ' ಮಾದರಿ ಉಲ್ಲೇಖಿಸಿದ ಶರದ್ ಪವಾರ್