ಬಿಹಾರ:ರೈಲ್ವೆ ನೇಮಕಾತಿ ಮಂಡಳಿಯ (RRB) ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಹುದ್ದೆಗಳಿಗೆ ನಡೆಸಲು ಯೋಜಿಸಿದ್ದ ಎರಡು ಹಂತದ ಪರೀಕ್ಷಾ ನೀತಿ ವಿರುದ್ಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಕಾರಣ, ರೈಲ್ವೆ ಸಚಿವಾಲಯವು ಎನ್‌ಟಿಪಿಸಿ ಹಾಗೂ ಮೊದಲ ಹಂತದ ಪರೀಕ್ಷೆಗಳನ್ನು ಮುಂದೂಡಿದೆ.
ಸಚಿವಾಲಯವು ನೋಟಿಸ್ ಹೊರಡಿಸಿದ್ದು, ಉದ್ಯೋಗಾಕಾಂಕ್ಷಿಗಳ ಸಮಸ್ಯೆ ಬಗ್ಗೆ ಅರಿತುಕೊಳ್ಳಲು ಉನ್ನತ ಸಮಿತಿ ರಚಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅಹವಾಲು ಮತ್ತು ಸಲಹೆಗಳನ್ನು ಸಮಿತಿಗೆ rrbcommittee@railnet.gov.inನಲ್ಲಿ ಮೂರು ವಾರಗಳೊಳಗೆ ಅಂದರೆ, ಫೆಬ್ರವರಿ 16ರವರೆಗೆ ಸಲ್ಲಿಸಬಹುದು ಎಂದು ತಿಳಿಸಿದೆ.
ರೈಲ್ವೆ ನೇಮಕಾತಿ ಮಂಡಳಿ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಉದ್ರಿಕ್ತ ಉದ್ಯೋಗ ಆಕಾಂಕ್ಷಿಗಳು ಗಯಾದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ ಚಲಿಸುತ್ತಿದ್ದ ರೈಲು ಹಾಗೂ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಪ್ರಯಾಗ್‌ರಾಜ್‌ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಸುಮಾರು ಸಾವಿರ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಡು ಹಂತದ ಪರೀಕ್ಷೆಗೆ ವಿರೋಧ:ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ನಡೆಸುವ ರೈಲ್ವೆ ಇಲಾಖೆಯ ನಿರ್ಧಾರವನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ. ಅಂತಿಮ ಆಯ್ಕೆಗಾಗಿ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯನ್ನು ಎದುರಿಸಬೇಕಿದೆ. ಇದು ಆರ್‌ಆರ್‌ಬಿ-ಎನ್‌ಟಿಪಿಸಿಯು ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಎಸಗಿರುವ ವಂಚನೆ ಎಂದು ಆರೋಪಿಸಿದ್ದಾರೆ. 2019ರಲ್ಲಿ ಹೊರಡಿಸಲಾದ ಆರ್‌ಆರ್‌ಬಿ ಅಧಿಸೂಚನೆಯಲ್ಲಿ ಒಂದೇ ಪರೀಕ್ಷೆಯನ್ನು ಉಲ್ಲೇಖಿಸಲಾಗಿತ್ತು. ಆದರೆ ಇದೀಗ ಸರ್ಕಾರವು ತಮ್ಮ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ.