ಭುವನೇಶ್ವರ (ಒಡಿಶಾ): ಮಹತ್ವದ ಬೆಳವಣಿಗೆಯಲ್ಲಿ ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ಆಡಳಿತಾತ್ಮಕ ಮಾಹಿತಿಯನ್ನು ಪರಿಗಣನೆಗೆ ಇಟ್ಟುಕೊಂಡು ರೈಲ್ವೆ ಮಂಡಳಿಯು ಈ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಶುಕ್ರವಾರ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಈ ರೈಲು ದುರಂತದಲ್ಲಿ ಕನಿಷ್ಠ 275 ಜನರು ಸಾವನ್ನದ್ದು, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮೊದಲು ಘಟನಾ ಸ್ಥಳದಲ್ಲಿ ಮಾತನಾಡಿದ್ದ ಸಚಿವ ಅಶ್ವಿನಿ ವೈಷ್ಣವ್, ರೈಲು ದುರಂತಕ್ಕೆ ಕಾರಣ ಮತ್ತು ಅದಕ್ಕೆ ಕಾರಣವಾದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ತನಿಖಾ ಮಾಹಿತಿ ಪ್ರಕಾರ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ (ಹಳಿ ಬದಲಿಸುವ ವ್ಯವಸ್ಥೆ) ಸಮಸ್ಯೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದರು. ಅಲ್ಲದೇ, ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಪೂರ್ಣಗೊಳಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಸಚಿವರು ಹೇಳಿದ್ದರು.
ದುರಂತದಲ್ಲಿ ಗಾಯಗೊಂಡ ಗಾಯಾಳುಗಳು ಬಾಲಸೋರ್, ಕಟಕ್ ಮತ್ತು ಭುವನೇಶ್ವರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಗಲು-ರಾತ್ರಿ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರ ತಂಡಗಳಿವೆ."ನಾವು ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ ಸಮಸ್ಯೆಯಿಂದ ರೈಲು ದುರಂತ: ಸಚಿವ ಅಶ್ವಿನಿ ವೈಷ್ಣವ್