ಸಮಷ್ಟಿಪುರ(ಬಿಹಾರ):ಬಿಹಾರದಲ್ಲಿ ರೈಲ್ವೆ ಇಲಾಖೆಗೆ ಸೇರಿದ ವಸ್ತುಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಸಮಷ್ಟಿಪುರದ ಪೂರ್ಣಿಮಾ ಕೋರ್ಟ್ ನಿಲ್ದಾಣದಲ್ಲಿ ರೈಲಿನ ಕೋಚನ್ನೇ ಕದಿಯಲಾಗಿತ್ತು. ಇದೀಗ ಪಂಡೋಲ್ ನಿಲ್ದಾಣದಿಂದ ಸಾಗುವ ಮಾರ್ಗದ 2 ಕಿಮೀ ದೂರದ ರೈಲು ಕಂಬಿಗಳನ್ನೆ ಕಿತ್ತು ಕದ್ದೊಯ್ದ ಘಟನೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ರೈಲ್ವೆ ವಿಭಾಗದ ಭದ್ರತಾ ಆಯುಕ್ತರು ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಸಮಷ್ಟಿಪುರ ಜಿಲ್ಲೆಯ ಪಂಡೋಲ್ ನಿಲ್ದಾಣದಿಂದ ಲೋಹತ್ ಸಕ್ಕರೆ ಕಾರ್ಖಾನೆಯಿಂದ ಮಧುಬನಿವರೆಗಿನ 2 ಕಿಲೋಮೀಟರ್ ಉದ್ದದ ರೈಲ್ವೆ ಹಳಿಯನ್ನು ಕಳವು ಮಾಡಲಾಗಿದೆ. ಸಕ್ಕರೆ ಕಾರ್ಖಾನೆ ಮುಚ್ಚಿದ ನಂತರ ಈ ರೈಲು ಮಾರ್ಗ ವರ್ಷಗಳಿಂದ ಬಳಕೆಯಾಗಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಖದೀಮರು 2 ಕಿಮೀವರೆಗೂ ರೈಲು ಕಂಬಿಗಳನ್ನೇ ಕಿತ್ತೊಯ್ದಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳತನಕ್ಕೆ ಅಧಿಕಾರಿಗಳ ನೆರವು:ವಿಚಿತ್ರ ಎಂದರೆ ಕಂಬಿಗಳನ್ನು ಕಿತ್ತುಕೊಂಡು ಹೋದ ಕಳ್ಳರಿಗೆ ರೈಲ್ವೆ ಇಲಾಖೆ ಅಧಿಕಾರಿಗಳೇ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಕೆಯಾದ ರೈಲ್ವೇ ಟ್ರ್ಯಾಕ್ ಅನ್ನು ಕಿತ್ತು ಮಾರಾಟ ಮಾಡಲು ಕಳ್ಳರು ಮತ್ತು ಅಧಿಕಾರಿಗಳ ಮಧ್ಯೆ ಒಪ್ಪಂದ ನಡೆದಿದೆ ಎಂದು ಹೇಳಲಾಗಿದೆ. ಟ್ರ್ಯಾಕ್ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ರೈಲ್ವೆ ವಿಭಾಗದ ಭದ್ರತಾ ಆಯುಕ್ತ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಿಲೆನ್ಸ್ ತಂಡ ಆರೋಪಿಗಳ ಪತ್ತೆಗೆ ಜಾಲ ಬೀಸಿದೆ.
ಇನ್ನೊಂದು ಪ್ರಕರಣದಲ್ಲಿ, ಪಾಟ್ನಾದ ಸಬ್ಜಿಬಾಗ್ ಪ್ರದೇಶದಲ್ಲಿ ಮೊಬೈಲ್ ಟವರ್ ಅನ್ನೇ ಕದ್ದೊಯ್ಯಲಾಗಿದೆ. ಕಂಪನಿಯ ಸೇವಾ ಸಿಬ್ಬಂದಿ ಎಂದು ಹೇಳಿಕೊಂಡು ಬಂದ ಖದೀಮರು ಟವರ್ ನವೀಕರಣ ಮಾಡಲಾಗುವುದು ಎಂದು ಜನರನ್ನು ನಂಬಿಸಿ ಕಿತ್ತೊಯ್ದಿದ್ದರು. ಕಂಪನಿಯ ನಿಜವಾದ ಸಿಬ್ಬಂದಿ ಟವರ್ ಎಣಿಕೆಯ ವೇಳೆ ಕಳುವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.