ಲಖನೌ: ಲಖನೌದ ನಿಗೋಹನ್ ರೈಲು ನಿಲ್ದಾಣದಲ್ಲಿ ಬಿಸಿಲಿನ ಬೇಗೆಗೆ ರೈಲು ಹಳಿಯೇ ಕರಗಿಹೋಗಿರುವ ಘಟನೆ ನಡೆದಿದೆ. ನೀಲಾಂಚಲ್ ಎಕ್ಸ್ಪ್ರೆಸ್ ಈ ಹಳಿಯ ಮೇಲೆ ಹಾದು ಹೋಗಿದೆ. ಆದರೆ ಕಡಿಮೆ ವೇಗದಲ್ಲಿ ಹೋಗಿದ್ದರಿಂದ ಯಾವುದೇ ಅಪಾಯ ಆಗಿರಲಿಲ್ಲ. ಈ ಮೂಲಕ ದೊಡ್ಡ ಅಪಘಾತ ದಿಂದ ಪಾರಾಗಿದೆ. ಲೊಕೊ ಪೈಲಟ್ನ ಮುಂಜಾಗೂಕತೆ ಹಾಗೂ ತಿಳಿವಳಿಕೆಯಿಂದ ರೈಲು ನಿಯಂತ್ರಿಸಿ ಆಗಬಹುದಾದ ಭಾರಿ ಅಪಾಯವನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ಕುರಿತು ತನಿಖೆ ನಡೆಸಲು ರೈಲ್ವೆ ಆಡಳಿತ ನಿರ್ಧರಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಲು ಮೂವರು ಎಂಜಿನಿಯರ್ಗಳ ತಂಡವನ್ನು ರಚಿಸಲಾಗಿದೆ.
ಮೂವರು ಇಂಜಿನಿಯರ್ಗಳು ಹಳಿ ಮೂಲಕ ಹಾದು ಹೋಗುವ ರೈಲನ್ನು ಪರಿಶೀಲಿಸುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಮತ್ತು ನಿಜವಾದ ಕಾರಣ ಏನು ಎಂಬುದಕ್ಕೆ ಬುಧವಾರದ ವೇಳೆಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಸೋಮವಾರ ಇಂಜಿನಿಯರ್ಗಳ ತಂಡ ಹಳಿಗಳನ್ನು ಪರಿಶೀಲಿಸಿದ ಬಳಿಕ ಸ್ಟೇಷನ್ ಮಾಸ್ಟರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದೆ. ವಿಚಾರಣಾ ತಂಡವು ಈಗ ನೀಲಾಂಚಲ್ ಎಕ್ಸ್ಪ್ರೆಸ್ನ ಲೊಕೊ ಪೈಲಟ್ ಮತ್ತು ಗಾರ್ಡ್ಗಳನ್ನು ವಿಚಾರಣೆ ನಡೆಸಲಿದೆ ಎಂಬ ಮಾಹಿತಿ ದೊರೆತಿದೆ.
ಜಗನ್ನಾಥ ಪುರಿಯಿಂದ ಆನಂದ್ ವಿಹಾರ್ಗೆ ಹೋಗುವ ನೀಲಾಂಚಲ್ ಎಕ್ಸ್ಪ್ರೆಸ್ ನಿಗೋಹಾನ್ ರೈಲು ನಿಲ್ದಾಣದ ಲೂಪ್ ಲೈನ್ನಿಂದ ಜೂನ್ 17 ಶನಿವಾರ ಮಧ್ಯಾಹ್ನ 2.30 ರ ಸುಮಾರಿಗೆ ಹಳಿಗಳ ಮೂಲಕ ಸಂಚರಿಸಿತ್ತು. ಈ ವೇಳೆ ಲೊಕೊ ಪೈಲಟ್ಗೆ ಹಲವು ಬಾರಿ ನಡುಕ ಉಂಟಾದ ಅನುಭವವಾಗಿದೆ. ಲೊಕೊ ಪೈಲಟ್ ರೈಲು ನಿಲ್ಲಿಸಿದಾಗ ವಕ್ರವಾದ ಹಳಿಗಳನ್ನು ಕಂಡು ಬೆಚ್ಚಿಬಿದ್ದರು. ಈ ಘಟನೆಯ ನಂತರ ಉತ್ತರ ರೈಲ್ವೆಯ ಡಿಆರ್ಎಂ ತನಿಖೆಗೆ ಆದೇಶಿಸಿದ್ದರು. ಇಂಜಿನಿಯರಿಂಗ್, ಮೆಕ್ಯಾನಿಕಲ್, ಆಪರೇಟಿಂಗ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದ್ದು, ತನಿಖೆಯಲ್ಲಿ ತಪ್ಪಿತಸ್ಥ ರೈಲ್ವೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.