ನಬರಂಗಪುರ(ಒಡಿಶಾ):ಜಿಲ್ಲೆಯ ರಾಯಗಢ ತಾಲೂಕಿನಲ್ಲಿ ಭೀಕರ ಕೊಲೆ ಪ್ರಕರಣ ವರದಿಯಾಗಿದೆ. ಪೊಲೀಸರು ಆರೋಪಿಗಳಾದ ಗಂಡ, ಹೆಂಡತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ:ನಬರಂಗಪುರ ಜಿಲ್ಲೆಯ ಬಾಗಬೇಡ ಗ್ರಾಮದ ಲೂತುರಾಮ್ ಎಂಬವರ ಮಗಳು ತಿಲಬತಿ ಗಂಡ್ (23) ಬುಧವಾರ ಸಂಜೆ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ತಿಳಿಸಿದ್ದರು. ಬಹಳ ಹೊತ್ತಾದರೂ ಆಕೆ ಮರಳಿ ಮನೆಗೆ ಬಂದಿರಲಿಲ್ಲ. ಮರುದಿನ ತಂದೆ ರಾಯಗಢ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಕಾಣೆಯಾದ ಯುವತಿ ತಿಲಬತಿ ಮುರ್ಮಡ್ಡಿಹಿ ಗ್ರಾಮದ ಚಂದ್ರ ರಾವುತ್ ಎಂಬಾತನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ, ತನ್ನನ್ನು ಮದುವೆಯಾಗುವಂತೆ ಯುವತಿ ಒತ್ತಾಯಿಸುತ್ತಿದ್ದಳು. ಕಳೆದ ಬುಧವಾರ ರಾತ್ರಿ ಯುವತಿ ತನ್ನ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ರಾವುತ್ ಮನೆಗೆ ಹೋಗಿದ್ದಾಳೆ. ಅಲ್ಲಿ ಮತ್ತೆ ತನ್ನನ್ನು ಮದುವೆಯಾಗುವಂತೆ ಆಕೆ ಪಟ್ಟು ಹಿಡಿದಿದ್ದಾಳೆ.
ಈ ವಿಚಾರವಾಗಿ ಗಂಡ (ಯುವತಿಯ ಪ್ರಿಯಕರ), ಹೆಂಡತಿ ಮತ್ತು ಯುವತಿಯ ಮಧ್ಯೆ ವಾಗ್ವಾದ ನಡೆದಿದೆ. ಇದು ಮಿತಿಮೀರಿದ್ದು ರಾವುತ್ ತನ್ನ ಪ್ರಿಯತಮೆಯ ಕೊಲೆಗೆ ಸಂಚು ರೂಪಿಸಿದ್ದಾನೆ. ಇದಕ್ಕೆ ಪತ್ನಿ ಬೆಂಬಲ ನೀಡಿದ್ದಾಳೆ. ಯುವತಿಯನ್ನು ಕೊಂದ ಬಳಿಕ ಶವವನ್ನು ಮನೆಯಿಂದ ಸುಮಾರು 300 ಮೀಟರ್ ದೂರದ ಮೂರುಮಡಿಹಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾರೆ. ಯುವತಿಯ ಗುರುತು ಮರೆಮಾಚಲು ಆಕೆಯ ದೇಹವನ್ನು ಸುಮಾರು 31 ಭಾಗಗಳನ್ನು ಕತ್ತರಿಸಿ ಹೂತು ಹಾಕಿದ್ದರು.