ರಾಯಗಢ(ಛತ್ತೀಸ್ಗಢ):ಛತ್ತೀಸ್ಗಢದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ದತ್ತು ಪಡೆದಿದ್ದ ಬಾಲಕಿಯನ್ನ ಬಾತ್ರೂಮಲ್ಲಿ ಕೂಡಿ ಹಾಕಿ ಹಲ್ಲೆ ಮಾಡಲಾಗಿದೆ. ದುರಂತವೆಂದರೆ ಹಾಗೆ ಮಾಡಿದ ಮಹಿಳೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಈ ಶಿಕ್ಷಕಿಯು ಬಡತನದ ಕುಟುಂಬದಿಂದ ಬಾಲಕಿಯೊಬ್ಬಳನ್ನು ದತ್ತು ಪಡೆದುಕೊಂಡಿದ್ದರು. ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ.
ಇಲ್ಲಿನ ಖರ್ಸಿಯಾ ಡೆವಲಪ್‌ಮೆಂಟ್ ಬ್ಲಾಕ್‌ನ ಬನ್ಸುಮುಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಆಶಾ ಅಗರ್ವಾಲ್ ಆರೋಪಿ. ಇವರ ಪತಿ ಬಿಶ್ರಾಮ್‌ಪುರ ಪ್ರದೇಶದಲ್ಲಿ ಚಾಲಕರಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡುತ್ತಿರುವ ಈ ಶಿಕ್ಷಕಿ 6 ವರ್ಷದ ಬಾಲಕಿಯನ್ನು ಕುಟುಂಬವೊಂದರಿಂದ ದತ್ತು ಪಡೆದುಕೊಂಡಿದ್ದರು. ಮೊದಮೊದಲು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಇವರು, ಬಳಿಕ ಬಾಲಕಿಯನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ.
ಶೌಚಾಲಯದಲ್ಲಿ ಬಂಧನ:ಮಕ್ಕಳಿಗೆ ಆದರ್ಶವಾಗಬೇಕಿದ್ದ ಶಿಕ್ಷಕಿ ಮಾಡಿದ ಪಾತಕ ಕೃತ್ಯ ಮಾತ್ರ ಅಸಹನೀಯ. 6 ವರ್ಷದ ಬಾಲಕಿಯನ್ನು ಮನೆಯ ಶೌಚಾಲಯದಲ್ಲಿ ಬಂಧಿಯಾಗಿಟ್ಟಿದ್ದರು. ಪ್ರತಿದಿನ ಸಂತ್ರಸ್ತೆ ಮೇಲೆ ಹಲ್ಲೆ ಮಾಡುತ್ತಿದ್ದರು. ಇದರಿಂದ ಬಾಲಕಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.
ವಿಷಯ ತಿಳಿದ ನೆರೆಹೊರೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಶಿಕ್ಷಕಿಯ ಮನೆಯ ಮೇಲೆ ದಾಳಿ ಮಾಡಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿ ಮಹಿಳಾ ಶಿಕ್ಷಕಿಯನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಚರ್ಚೆ: ನಾಗಪುರ ತಂಡ ನನ್ನ ಚಲನವಲನ ತಿಳಿಯುವ ಮುನ್ನ ಚುನಾವಣೆ ಮುಗಿದಿರುತ್ತೆ ಎಂದ ಮಾಜಿ ಸಿಎಂ
ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿ ಶಿಕ್ಷಕಿಯ ಕಾರು ಚಾಲಕನ ಮಗಳಾಗಿದ್ದಳು. ಬಡತನದ ಕಾರಣ ಆತ ತನ್ನ ಮಗಳನ್ನು ಶಿಕ್ಷಕಿಗೆ ದತ್ತು ನೀಡಿದ್ದ. ಉತ್ತಮ ಶಿಕ್ಷಣ ಸಿಗುತ್ತದೆ ಎಂದು ಆತ ಭಾವಿಸಿದ್ದ. ಆದರೆ, ಶಿಕ್ಷಕಿ ಮಾತ್ರ ರ್ಕ್ರೌರ್ಯ ಮೆರೆದಿದ್ದಾಳೆ. ಕಳೆದ 2 ವರ್ಷಗಳಿಂದ ಬಾಲಕಿ ಶಿಕ್ಷಕಿಯ ಜೊತೆಗೆ ವಾಸಿಸುತ್ತಿದ್ದಳು.
ಕೆಲಸದವನ ಮೇಲೂ ಹಲ್ಲೆ ಆರೋಪ:ಶಿಕ್ಷಕಿಯ ದೌರ್ಜನ್ಯ ಪ್ರಕರಣಗಳು ಇದೇ ಮೊದಲಲ್ಲ. ತನ್ನ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮೇಲೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬಿಲಾಸ್‌ಪುರದ ನಿವಾಸಿಯಾಗಿರುವ ವ್ಯಕ್ತಿ ಆರೋಪಿ ಶಿಕ್ಷಕಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. 20 ದಿನಗಳ ಹಿಂದೆಯಷ್ಟೇ ಕೆಲಸ ಶುರು ಮಾಡಿದ್ದರು. ಶಿಕ್ಷಕಿ ಯಾವುದೋ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ಶಿಕ್ಷಕಿಯ ನಡವಳಿಕೆ ಉತ್ತಮವಾಗಿಲ್ಲ ಎಂದು ವ್ಯಕ್ತಿ ಆರೋಪಿಸಿದ್ದಾರೆ.
ಸಂತ್ರಸ್ತ ಬಾಲಕಿಯನ್ನು ಅಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಈ ಹಿಂದೆಯೂ ಮಹಿಳಾ ಶಿಕ್ಷಕಿ ಹೆಣ್ಣು ಮಗುವನ್ನು ಒತ್ತೆಯಾಳಾಗಿಟ್ಟುಕೊಂಡು ಥಳಿಸಿದ ಆರೋಪವಿದೆ. ಬಾಲಕಿಯನ್ನು ರಕ್ಷಿಣೆ ಮಾಡಲಾಗಿತ್ತು. ಇದು ಶಿಕ್ಷಕಿಯ ಮಾನಸಿಕ ಸ್ಥಿತಿಯನ್ನು ತೋರಿಸುತ್ತಿದೆ. ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಕ್ ದನ್ಸೇನಾ ಹೇಳಿದರು.
ಓದಿ:ಜೀವನದ 'ಹಾಫ್ ಸೆಂಚುರಿ' ಸಂಭ್ರಮದಲ್ಲಿ 'ಕ್ರಿಕೆಟ್ ದೇವರು': ಸಚಿನ್ ಸಾಧನೆಗೆ ಸರಿಸಾಟಿ ಯಾರು?