ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿಗಳ ಸ್ಮಾರಕಗಳಿಗೆ ರಾಹುಲ್ ಭೇಟಿ ನೀಡಲಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೂ ಭೇಟಿ ಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 7ರಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿದ್ದು, ಇಂದು ಹರಿಯಾಣ ಮೂಲಕ ದೆಹಲಿಗೆ ಪ್ರವೇಶಿಸಿದೆ. ಈ ಬಗ್ಗೆ ಎಐಸಿಸಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಮಾತನಾಡಿ, ಭಾರತ್ ಜೋಡೋ ಯಾತ್ರೆ ಯಾತ್ರೆಯ ಭಾಗವಾಗಿ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿಗಳ ಸ್ಮಾರಕಗಳಿಗೆ ರಾಹುಲ್ ಗೌರವ ಸಲ್ಲಿಸಿದ್ದಾರೆ. ನಾಳೆಯಿಂದ (ಡಿಸೆಂಬರ್ 25) ಜನವರಿ 2ರವರೆಗೆ 9 ದಿನಗಳ ಯಾತ್ರೆಗೆ ವಿರಾಮ ಇರಲಿದೆ. ಜನವರಿ 3ರಂದು ನವದೆಹಲಿಯಿಂದ ಪಶ್ಚಿಮ ಉತ್ತರ ಪ್ರದೇಶಕ್ಕೆ ಯಾತ್ರೆ ಪುನಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸಾಂಸ್ಥಿಕ ಸುಧಾರಣೆ ಪರ ಬ್ಯಾಟ್ ಬೀಸಿದ ಖರ್ಗೆ: ಭಾರತ ಜೋಡೋದಿಂದ ಬಿಜೆಪಿಗೆ ನಡುಕ ಎಂದು ಟಾಂಗ್
ಇದೇ ವೇಳೆ ಎಐಸಿಸಿ ಸಂಘಟನೆಯ ಉಸ್ತುವಾರಿ ಕಾರ್ಯದರ್ಶಿ ವಂಶಿಚಂದ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿಯು ಜನರಿಗೆ ಸಕಾರಾತ್ಮಕ ಸಂಕೇತ ನೀಡುತ್ತಿದೆ. ಭಾರತ್ ಜೋಡೋ ಯಾತ್ರೆಯನ್ನು ಗುರಿಯಾಗಿಸಿಕೊಂಡು ಸಾಂಕ್ರಾಮಿಕ ರೋಗದ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿಗೂ ಇದು ಕೌಂಟರ್ ಸಂದೇಶವನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ.
ಕೋವಿಡ್ ವಿಚಾರವಾಗಿ ಮೊದಲು ವೈಜ್ಞಾನಿಕ ಆಧಾರಿತ ಮಾರ್ಗಸೂಚಿಗಳನ್ನು ಹೊರತರಬೇಕು. ನಂತರ ಅವುಗಳನ್ನು ಅನುಸರಿಸಲು ಸೂಚಿಸಬೇಕು. ಆದರೆ, ವಾಸ್ತವವಾಗಿ, ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ಯಶಸ್ಸಿನ ಬಗ್ಗೆ ಚಿಂತಿತರಾಗಿರುವ ಬಿಜೆಪಿಯು ಯಾತ್ರೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ರಾಹುಲ್ ತಮ್ಮ ಯಾತ್ರೆಯು ರಾಜಕೀಯ ಯಾತ್ರೆ ಎಂದು ಎಂದಿಗೂ ಹೇಳಲಿಲ್ಲ. ಇದು ದೇಶವನ್ನು ಒಂದುಗೂಡಿಸಲು ಪ್ರಯತ್ನಿಸುವ ಸಾಮಾಜಿಕ ಚಳವಳಿಯಾಗಿದೆ. ಯಾತ್ರೆಯ ಸಂದೇಶ ಬಹು ದೂರ ಸಾಗಿದ್ದು, ಇದರಿಂದ ಬಿಜೆಪಿ ಆಘಾತಗೊಂಡಿದೆ ಎಂದು ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ