ಚಂಡೀಗಢ (ಹರಿಯಾಣ) :ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಹರಿಯಾಣದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮದಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಮತ್ತು ಇತರ ಕೆಲವು ಕುಸ್ತಿಪಟುಗಳನ್ನು ಬುಧವಾರ ಭೇಟಿಯಾದರು. ಇಲ್ಲಿನ ವೀರೇಂದ್ರ ಆರ್ಯ ಅಖಾಡ ಕೇಂದ್ರಕ್ಕೆ ಆಗಮಿಸಿದ ರಾಹುಲ್ಗೆ ಕುಸ್ತಿಪಟುಗಳು ಹೂಗುಚ್ಛಗಳ ಬದಲಿಗೆ ತಾಜಾ ಮೂಲಂಗಿ ತರಕಾರಿ ನೀಡಿ ಸ್ವಾಗತಿಸಿದರು.
ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಬಳಿಕ ಕುಸ್ತಿಪಟು ಬಜರಂಗ್ ಪುನಿಯಾ ಅವರೊಂದಿಗೆ ಕುಸ್ತಿ ಅಭ್ಯಾಸವನ್ನೂ ನಡೆಸಿದರು. ಕುಸ್ತಿಪಟುಗಳ ದಿನಚರಿಯ ಬಗ್ಗೆಯೂ ಕೇಳಿ ತಿಳಿದುಕೊಂಡರು. ಹರಿಯಾಣದ ಛಾರಾ ಕುಸ್ತಿಪಟು ದೀಪಕ್ ಪೂನಿಯಾ ಅವರ ಸ್ವಗ್ರಾಮವಾಗಿದೆ. ದೀಪಕ್ ಮತ್ತು ಬಜರಂಗ್ ಪೂನಿಯಾ ಇಬ್ಬರೂ ವೀರೇಂದ್ರ ಅಖಾಡದಿಂದ ಕುಸ್ತಿಯನ್ನು ಪ್ರಾರಂಭಿಸಿದ್ದರು.
ರಾಹುಲ್ ಗಾಂಧಿ ಅವರು ನಿರ್ಗಮಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಬಜರಂಗ್ ಪೂನಿಯಾ, ಕಾಂಗ್ರೆಸ್ ಸಂಸದರು ಅಖಾಡದಲ್ಲಿ ಕುಸ್ತಿಪಟುಗಳ ದೈನಂದಿನ ದಿನಚರಿಯನ್ನು ಗಮನಿಸಿದರು. ಬಳಿಕ ನಮ್ಮೊಂದಿಗೆ ಸಂವಾದ ನಡೆಸಿದರು. ಭಾರತೀಯ ಕುಸ್ತಿ ಫೆಡರೇಷನ್ ಬಗ್ಗೆಯೂ ಚರ್ಚಿಸಿದರು. ಪೈಲ್ವಾನ್ಗಳು ತಮಗಾಗುತ್ತಿರುವ ನೋವಿನ ಬಗ್ಗೆಯೂ ಅವರಲ್ಲಿ ಹೇಳಿಕೊಂಡರು ಎಂದು ತಿಳಿಸಿದರು.
ಬಂಡೆದ್ದ ಕುಸ್ತಿಪಟುಗಳ ಭೇಟಿ ಮಾಡಿದ್ದ ಪ್ರಿಯಾಂಕಾ:ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತರು ಕುಸ್ತಿ ಫೆಡರೇಶನ್‌ನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ವಿನೇಶ್ ಪೋಗಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಕ್ಷಿ ಮಲಿಕ್ ಅವರನ್ನು ಭೇಟಿ ಮಾಡಿದ್ದರು.
ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಜಯಗಳಿಸಿದ ನಂತರ, ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ಪೈಲ್ವಾನ್ ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಬಳಿಕ ಬಜರಂಗ್ ಪುನಿಯಾ ಅವರು ಪದ್ಮಶ್ರೀಯನ್ನು ಹಿಂದಿರುಗಿಸುವುದಾಗಿ ಘೋಷಿಸಿದರು. ಇದೀಗ ಮತ್ತೊಬ್ಬ ಒಲಿಂಪಿಯನ್ ವಿನೇಶ್ ಫೋಗಟ್ ಅವರು ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಮಂಗಳವಾರ ಘೋಷಿಸಿದರು.
ಈ ಮಧ್ಯೆ ವಿವಾದಕ್ಕೀಡಾಗಿರುವ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅನ್ನು ಕೇಂದ್ರ ಸರ್ಕಾರ ಅಮಾನತು ಮಾಡಿದೆ. ಅದರ ವ್ಯವಹಾರಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲು ಕೇಂದ್ರ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಗೆ ಸೂಚನೆ ನೀಡಿದೆ.
ಇದನ್ನೂ ಓದಿ:ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್