ಉದಯ್‌ಪುರ್(ರಾಜಸ್ಥಾನ) :ದಿನದಿಂದ ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಕ್ಷೀಣಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಪಡಿಸುವ ಉದ್ದೇಶದಿಂದ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೂರು ದಿನಗಳ ಚಿಂತನ್ ಶಿಬಿರ ಇಂದು ಮುಕ್ತಾಯಗೊಳ್ಳುತ್ತಿದೆ. 2024ರ ಲೋಕಸಭೆ ಚುನಾವಣೆ ಹಾಗೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷವನ್ನು ಹೇಗೆ ಸಜ್ಜುಗೊಳಿಸಬೇಕು ಎಂದು ಕಳೆದ 2 ದಿನದಿಂದ ಚರ್ಚಿಸಲಾಗಿದೆ. ಜೊತೆಗೆ ಪಾದಯಾತ್ರೆ ಕುರಿತು ಸಹ ಮಾತುಕತೆ ನಡೆದಿದ್ದು, ಈ ವರ್ಷದ ಕೊನೆಯಲ್ಲಿ ಕಾಲ್ನಡಿಗೆ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ.