ನವದೆಹಲಿ: ತೆಲಂಗಾಣದಲ್ಲಿ ರೈತರು ಬೆಳೆದಿರುವ ಭಕ್ತ ಖರೀದಿ ವಿಚಾರವಾಗಿ ಟಿಆರ್‌ಎಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಇದೀಗ ಕಾಂಗ್ರೆಸ್ ಎಂಟ್ರಿ ಕೊಟ್ಟಿದ್ದು, ರೈತರ ಭತ್ತ ಖರೀದಿಸಲು ಬಿಜೆಪಿ ಮತ್ತು ಟಿಆರ್‌ಎಸ್ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ತೆಲುಗು ಭಾಷೆಯಲ್ಲಿ ಟ್ವೀಟ್ ಮಾಡಿರುವ ಗಾಂಧಿ, ತೆಲಂಗಾಣ ರೈತರ ಧಾನ್ಯಗಳನ್ನು ಖರೀದಿಸುವ ವಿಷಯದಲ್ಲಿ ಬಿಜೆಪಿ, ಟಿಆರ್‌ಎಸ್ ಸರ್ಕಾರಗಳು ತಮ್ಮ ನೈತಿಕ ಹೊಣೆಗಾರಿಕೆಯನ್ನು ನಿರ್ಲಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ರೈತ ವಿರೋಧಿ ನೀತಿಗಳ ಮೂಲಕ ಅನ್ನ ನೀಡುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಕಟಾವು ಮಾಡಿದ ಪ್ರತಿ ಧಾನ್ಯವನ್ನು ಖರೀದಿಸಿ ಎಂದು ಒತ್ತಾಯಿಸಿರುವ ರಾಹುಲ್ ಗಾಂಧಿ ಮತ್ತೊಂದು ಟ್ವೀಟ್‌ನಲ್ಲಿ, ತೆಲಂಗಾಣದಲ್ಲಿ ಕೊನೆಯ ಭತ್ತದ ಬೀಜವನ್ನು ಖರೀದಿ ಮಾಡೋವರೆಗೆ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಟಿಆರ್‌ಎಸ್‌ನ ಮಾಜಿ ಸಂಸದೆ ಕವಿತಾ ಕಲ್ವಕುಂಟ್ಲಾ, ರಾಜಕೀಯ ಲಾಭಕ್ಕಾಗಿ ಟ್ವಿಟರ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸುವುದು ಅಲ್ಲ, ನೀವು ಪ್ರಾಮಾಣಿಕರಾಗಿದ್ದರೆ, ತೆಲಂಗಾಣ ಸಂಸದರನ್ನು ಬೆಂಬಲಿಸಿ ಲೋಕಸಭೆಯಲ್ಲಿ ಬಾವಿಗಿಳಿದು ಪ್ರತಿಭಟ ಮಾಡಿ. ನಮ್ಮ ಬೇಡಿಕೆ ಒಂದು ದೇಶ ಏಕ ಖರೀದಿ ನೀತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ವಿಪ್ ಮಾಣಿಕ್ಕಂ ಠಾಗೋರ್ ಅವರು ಕವಿತಾಗೆ ಟಾಂಗ್ ನೀಡಿ, ಮಾಜಿ ಸಂಸದರಿಗೆ ಸಂಸತ್ತಿನೊಳಗೆ ಪ್ರವೇಶವಿಲ್ಲ, ಆದ್ದರಿಂದ ನೀವು ಸಂಸತ್ತಿಗೆ ಬರಲು ಸಾಧ್ಯವಿಲ್ಲ. ಟಿಆರ್‌ಎಸ್ ಸಂಸದರು ಸೆಂಟ್ರಲ್ ಹಾಲ್‌ನಲ್ಲಿ ಧೋಕ್ಲಾ ಮತ್ತು ಬಿರಿಯಾನಿ ಸವಿಯುತ್ತಿದ್ದಾರೆ, ಆದರೆ, ಸದನದ ಬಾವಿಯಲ್ಲಿ ಅಲ್ಲ. 2021ರ ಆಗಸ್ಟ್‌ನಲ್ಲಿ ಎಫ್‌ಸಿಐಗೆ ಬಾಯ್ಲಡ್ ರೈಸ್ ನೀಡದಂತೆ ಒಪ್ಪಂದಕ್ಕೆ ಸಹಿ ಹಾಕಿ ತೆಲಂಗಾಣದ ರೈತರ ಕತ್ತು ಹಿಸುಕಿ ಕೊಂದವರು ಯಾರು ಎಂಬುದನ್ನು ಮರೆಯಬಾರದು? ಎಂದು ವಾಕ್‌ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ:ಗುಜರಾತ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ