ರಾಹುಲ್ ಗಾಂಧಿ ಜಾಲಿ ಬೈಕ್ ರೈಡ್ ಲೇಹ್ (ಲಡಾಖ್):ಬೈಕ್ ರೈಡಿಂಗ್ಗೆ ಪ್ರಸಿದ್ಧಿಯಾಗಿರುವ ಲಡಾಖ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೈಕ್ ಓಡಿಸಿ ಗಮನ ಸೆಳೆದರು. ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ಕೆಟಿಎಂ 390 ಡ್ಯೂಕ್ ಬೈಕ್ ಅನ್ನು ಸವಾರಿ ಮಾಡಿದರು. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಲೇಹ್ ನಗರದಿಂದ ಪ್ಯಾಂಗಾಂಗ್ ಸರೋವರಕ್ಕೆ ರಾಹುಲ್ ಮತ್ತು ಅವರ ಸಂಗಡಿಗರು ಮೆಮೋರಿ ಲೈನ್ನಲ್ಲಿ ಬೈಕ್ ರೈಡ್ ನಡೆಸಿದರು. ತಮ್ಮ ಈ ಸವಾರಿಯ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳ ಸಮೇತ ಹಂಚಿಕೊಂಡಿದ್ದಾರೆ. ನಮ್ಮ ತಂದೆ(ರಾಜೀವ್ ಗಾಂಧಿ) ಹೇಳುತ್ತಿದ್ದ ಹಾಗೆ, ಪ್ಯಾಂಗಾಂಗ್ ಸರೋವರ ವಿಶ್ವದ ಅತಿ ಸುಂದರ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬೈಕ್ ಓಡಿಸಿದ ಅನುಭವ ಖುಷಿ ನೀಡಿತು ಎಂದು ಬರೆದುಕೊಂಡಿದ್ದಾರೆ.
ಪ್ಯಾಂಗಾಂಗ್ ಸರೋವರದಲ್ಲಿ ರಾಜೀವ್ ಗಾಂಧಿಗೆ ಪೂಜೆ:ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಭಾನುವಾರ ತಮ್ಮ ತಂದೆ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ಯಾಂಗಾಂಗ್ ಸರೋವರದಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜೀವ್ ಗಾಂಧಿ ಅವರು ಲಡಾಖ್ ಪ್ರದೇಶವನ್ನು ಬಹುವಾಗಿ ಇಷ್ಟಪಟ್ಟ ಪ್ರದೇಶವಾಗಿತ್ತು. ಹೀಗಾಗಿ ಅವರು ಇಲ್ಲೇ ಪೂಜೆ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲಡಾಖ್ ಪ್ರವಾಸದಲ್ಲಿ ಗಾಂಧಿ ಕುಡಿ:ಭಾರತ್ ಜೋಡೋ ಯಾತ್ರೆ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಲಡಾಖ್ಗೆ ಬರಲು ಆಗಿರಲಿಲ್ಲ. ಬಳಿಕವೂ ಕಾಶ್ಮೀರಕ್ಕೆ ಮಾತ್ರ ಬಂದಿದ್ದರು. ಹೀಗಾಗಿ ಲಡಾಖ್ಗೆ ಪ್ರತ್ಯೇಕ ಭೇಟಿ ನೀಡಿದ್ದು, ಅವರು ಪ್ಯಾಂಗಾಂಗ್ ಸರೋವರ ಮತ್ತು ಕಾರ್ಗಿಲ್‌ಗೆ ಭೇಟಿ ನೀಡಿದ್ದಾರೆ. ನಿನ್ನೆ(ಶುಕ್ರವಾರ) ಇಲ್ಲಿಗೆ ಬಂದಿಳಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದ್ದರು. ಇನ್ನು ಆರು ದಿನಗಳ ಕಾಲ ರಾಹುಲ್ ಲಡಾಕ್ನಲ್ಲಿ ತಂಗಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಿನ್ನೆ, ಕಾಂಗ್ರೆಸ್ ಸಂಸದರು ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದರು.
ಭಾನುವಾರ ಪ್ಯಾಂಗಾಂಗ್ ಸರೋವರದಲ್ಲಿ ನಡೆಯುವ ರಾಜೀವ್ ಗಾಂಧಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಕಾರ್ಗಿಲ್‌ಗೆ ಭೇಟಿ ನೀಡಿ ಅಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಆರು ದಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ರಾಹುಲ್ ಪಕ್ಷದ ಮುಖಂಡರೊಂದಿಗೆ ಬೈಕ್‌ಗಳಲ್ಲಿ ಸಂಚರಿಸಿದ್ದರು. ಈ ಹಿಂದೆ ತಮಗೂ ಕೂಡ ಬೈಕ್ ಕ್ರೇಜ್ ಇದ್ದು, ಭದ್ರತಾ ಕಾರಣಗಳಿಗಾಗಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
ಇದನ್ನೂ ಓದಿ:ಇಂದಿನಿಂದ ರಾಹುಲ್ ಗಾಂಧಿ 2 ದಿನಗಳ ಲಡಾಖ್ ಪ್ರವಾಸ ಸಾಧ್ಯತೆ