ನವದೆಹಲಿ:ಪಂಚರಾಜ್ಯ ಚುನಾವಣೆ ಕಣ ರಂಗೇರಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದಿನಿಂದ ಕ್ರಮವಾಗಿ ಅಸ್ಸೋಂ ಮತ್ತು ಕೇರಳದಲ್ಲಿ ಮತಬೇಟೆ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಅಸ್ಸೋಂನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಇಲ್ಲಿ ಕಾಂಗ್ರೆಸ್ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈಶಾನ್ಯ ರಾಜ್ಯದಲ್ಲಿ ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು, ಮುಂದಿನ ಹಂತದ ಚುನಾವಣೆ ಗುರುವಾರ ನಡೆಯಲಿದೆ.
ರಾಹುಲ್ ಸಿಲ್ಚಾರ್‌ನ ತಾರಾಪುರದ ಇಂಡಿಯಾ ಕ್ಲಬ್ ಮೈದಾನದಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದು, ಬಳಿಕ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್‌ನಲ್ಲಿರುವ ಡಿಎಸ್‌ಎ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಾಜನ್‌ನಲ್ಲಿರುವ ಹಂಜಂಗ್‌ಲ್ಯಾಂಗ್ಸೊ ಸ್ಪೋರ್ಟ್ಸ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿಯೂ ಭಾಗವಹಿಸಲಿದ್ದಾರೆ.
ಇನ್ನೊಂದೆಡೆ ಪ್ರಿಯಾಂಕಾ ಗಾಂಧಿ ಅವರು ಕೇರಳದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದಲ್ಲದೆ, ರೋಡ್ ಶೋಗಳಲ್ಲಿ ಭಾಗಿಯಾಗಲಿದ್ದಾರೆ. ದೇವರನಾಡಿನಲ್ಲಿ ಏ. 6ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ:ಹೊರರಾಜ್ಯ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ