ನವದೆಹಲಿ :ದೇಶದಲ್ಲಿ ವಿಮಾನಯಾನ ಇಂಧನಕ್ಕಿಂತ ಪೆಟ್ರೋಲ್ ದರ ದುಬಾರಿಯಾಗಿದೆ ಎಂದು ವರದಿಗಳು ಬಂದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಇದು ಬಹಳ ಗಂಭೀರ ಸಮಸ್ಯೆಯಾಗಿದೆ. ಚುನಾವಣೆ-ಮತ-ರಾಜಕೀಯದ ಮೊದಲು ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಆದರೆ, ಜನರ ದೈನಂದಿನ ಅಗತ್ಯಗಳು ಇಂದು ಪೂರೈಸುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ನೇಹಿತರ ಲಾಭಕ್ಕಾಗಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಹೀಗೆ ಮೋಸ ಹೋಗುವ ಜನರೊಂದಿಗೆ ನಾನು ಇದ್ದೇನೆ ಮತ್ತು ಅವರ ಪರವಾಗಿ ದನಿ ಎತ್ತುತ್ತಲೇ ಇರುವೆ" ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕೇಂದ್ರ ಸರ್ಕಾೊರವನ್ನು ಟೀಕಿಸಿದ್ದಾರೆ. ಚಪ್ಪಲಿ ಹಾಕುವ ಸಾಮಾನ್ಯ ಜನರು ಕೂಡ ವಿಮಾನದಲ್ಲಿ ಹಾರಾಡುತ್ತಾರೆ ಎಂದು ಸರ್ಕಾರ ಭರವಸೆ ನೀಡಿತ್ತು.
ಆದರೆ, ಈಗ ಮಧ್ಯಮ ವರ್ಗದವರು ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ. ವಿಮಾನವಿರಲಿ, ಇಂಧನ ದರ ಏರಿಕೆಯಿಂದಾಗಿ ರಸ್ತೆಗಳಲ್ಲಿ ಕೂಡ ಪ್ರಯಾಣಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನಿರಂತರ ಏರಿಕೆ ಬಳಿಕ ಇಂದು ಇಂಧನ ದರ ಸ್ಥಿರ: ಬೆಂಗಳೂರಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..
ಕೋವಿಡ್ ಎರಡನೇ ಅಲೆ ಆರಂಭದ ಬಳಿಕ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಬಂದಿದೆ. ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 105.84 ರೂ. ಹಾಗೂ ಲೀಟರ್ ಡೀಸೆಲ್ ಬೆಲೆ 94.57 ರೂ. ಇದೆ. ಹಾಗೆಯೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ನೂರರ ಗಡಿ ದಾಟಿದ್ದು, ಪೆಟ್ರೋಲ್ ದರ 109.53 ರೂ. ಇದೆ.