ನವದೆಹಲಿ:ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಾಳೆ(ಏಪ್ರಿಲ್ 3 ರಂದು) ಸೂರತ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಅವರ ಕಾನೂನು ತಂಡವು ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಲು ಸಕಲ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಉಪನಾಮೆ ವಿಚಾರವಾಗಿ ನೀಡಿದ್ದ ವಿವಾದಿತ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇದೇ ವೇಳೆ ಅವರಿಗೆ ಜಾಮೀನು ಕೂಡಾ ನೀಡಿತ್ತು.
ರಾಹುಲ್ ಗಾಂಧಿ ಅವರಿಗೆ ಸೂರತ್ ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಕಲ ನೆರವು ನೀಡಲಾಗುವುದು. ಕಾನೂನು ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದರು. ಈ ವಿಷಯವನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಪಕ್ಷ ಸಿದ್ಧವಿದೆ ಎಂದು ಕೂಡ ಹೇಳಿದ್ದರು.
ರಾಹುಲ್ ಸಂಸದ ಸ್ಥಾನ ಅನರ್ಹ:ಶಿಕ್ಷೆ ಪ್ರಕಟವಾದ ಬಳಿಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇವರು ಕೇರಳದ ವಯನಾಡ್ ಸಂಸದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅನರ್ಹತೆಯನ್ನು ಕಾಂಗ್ರೆಸ್ ಮತ್ತು ಕೆಲವು ವಿಪಕ್ಷ ನಾಯಕರು ಖಂಡಿಸಿದ್ದರು. ಇಂದೊಂದು ಸೇಡಿನ ರಾಜಕಾರಣ. ರಾಜಕೀಯವಾಗಿಯೇ ಎದುರಿಸಲಾಗುವುದು ಎಂದು ಹೇಳಿದ್ದರು.