ವಯನಾಡ್ (ಕೇರಳ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿದ್ದು, ಮಹಾತ್ಮ ಗಾಂಧಿ ಪೋಟೋಗೆ ಹಾನಿ ಉಂಟಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ಸೇರಿದಂತೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಪೆಟ್ಟ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜುಲೈ 24ರಂದು ವಯನಾಡ್ನಲ್ಲಿರುವ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿದ್ದ ಎಸ್‌ಎಫ್‌ಐ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಈ ವೇಳೆ ಕಚೇರಿಯೊಳಗಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಲ್ಲದೇ, ಎಸ್‌ಎಫ್‌ಐ ಧ್ವಜಗಳನ್ನೂ ಹಾರಿಸಿದ್ದರು.
ಸುಳ್ಳು ಪ್ರಚಾರ ನಡೆಸಿದ್ದ ಕಾಂಗ್ರೆಸ್: ಇದರ ಲಾಭ ಪಡೆದುಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಎಸ್‌ಎಫ್‌ಐ ಕಾರ್ಯಕರ್ತರು ಗಾಂಧೀಜಿಯ ಭಾವಚಿತ್ರ ಧ್ವಂಸ ಮಾಡಿದ್ದಾರೆಂದು ವ್ಯಾಪಕ ಪ್ರಚಾರ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಸ್‌ಎಫ್‌ಐ, ಕಾಂಗ್ರೆಸ್ ಕಾರ್ಯಕರ್ತರೇ ರಾಷ್ಟ್ರಪಿತನ ಭಾವಚಿತ್ರಕ್ಕೆ ಹಾನಿ ಉಂಟು ಮಾಡಿದ್ದಾರೆಂಬ ಪ್ರತಿ ಆರೋಪ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದರು.
ತನಿಖೆ ವೇಳೆ ಸತ್ಯಾಂಶ ಬಯಲು: ತನಿಖೆಯ ವೇಳೆ ರಾಹುಲ್ ಗಾಂಧಿ ಅವರ ಪಿಎ ರತೀಶ್ ಕುಮಾರ್, ಸಂಸದರ ಕಚೇರಿ ಸಿಬ್ಬಂದಿ, ರಾಹುಲ್ ಎಸ್ ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್ ಅವರು ಭಾವಚಿತ್ರ ಧ್ವಂಸ ಮಾಡಿದ್ದು ದೃಢಗೊಂಡಿದೆ. ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರತೀಶ್ ಖುದ್ದಾಗಿ ಸಾಕ್ಷಿ ನುಡಿದಿದ್ದಾರೆ.