ಪಣಜಿ(ಗೋವಾ):ಕಾಂಗ್ರೆಸ್ ನಾಯಕರ ಚೀನಾ ಪ್ರೀತಿ ಎಲ್ಲ ಮಿತಿಗಳನ್ನು ಮೀರಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಮತ್ತು ಭಾರತ ಸರ್ಕಾರ ನಿದ್ರಿಸುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅತಿರೇಕದ ಹೇಳಿಕೆ ನೀಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರನ್ನು ಕೂಡ ಸಾವಂತ್ ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರ ಚೀನಾ ಮೇಲಿನ ಪ್ರೀತಿ ಮತ್ತು ಭಾರತದ ರಾಜಕೀಯ ಪಕ್ಷ ಹಾಗೂ ಪ್ರಧಾನಿಯ ಮೇಲಿನ ದ್ವೇಷವು ಮಿತಿ ಮೀರಿದೆ. ಭಾರತೀಯ ಸಶಸ್ತ್ರ ಪಡೆಗಳು ಭಾರತದ ಗಡಿಗಳನ್ನು ಶೌರ್ಯ ಮತ್ತು ಧೈರ್ಯದಿಂದ ಕಾಪಾಡುತ್ತಿವೆ. ಭಾರತದ ಜನ ಸಶಸ್ತ್ರ ಪಡೆಗಳನ್ನು ಹೃದಯಪೂರ್ವಕವಾಗಿ ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ ಎಂದು ಸಾವಂತ್ ಶನಿವಾರ ಸಂಜೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ರಾಜಸ್ಥಾನದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಮತ್ತು ಭಾರತ ಸರ್ಕಾರ ನಿದ್ರಿಸುತ್ತಿದೆ ಮತ್ತು ಬೆದರಿಕೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಚೀನಾ ಭಾರತದ 2,000 ಚದರ್ ಕಿಲೋಮೀಟರ್ ಪ್ರದೇಶ ವಶಪಡಿಸಿಕೊಂಡಿದೆ, 20 ಭಾರತೀಯ ಸೈನಿಕರನ್ನು ಕೊಂದಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ನಮ್ಮ ಯೋಧರನ್ನು ಥಳಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಮತ್ತೊಂದು ಟ್ವೀಟ್‌ನಲ್ಲಿ ಸಾವಂತ್, ಪಾಕಿಸ್ತಾನದ ವಿದೇಶಾಂಗ ಸಚಿವರ ಅತಿರೇಕದ ಹೇಳಿಕೆಗಳು ಅತ್ಯಂತ ಖಂಡನೀಯ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಡೈನಾಮಿಕ್ ನಾಯಕತ್ವದಲ್ಲಿ ಭಾರತದ ಜಾಗತಿಕ ಹೆಜ್ಜೆಗುರುತು ಹೆಚ್ಚಾಗುತ್ತಿದ್ದಂತೆ, ಭಯೋತ್ಪಾದಕ ರಾಷ್ಟ್ರದ ರಾಜವಂಶಸ್ಥರ ಕುಡಿಯ ಹತಾಶೆ ಹೆಚ್ಚಾಗುತ್ತಿದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ವಿವಿಧ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದನ್ನು ಎತ್ತಿ ತೋರಿಸಿ, ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಬಣ್ಣಿಸಿದ್ದರು. ಇದರಿಂದ ಹತಾಶೆಗೊಂಡ ಪಾಕಿಸ್ತಾನ ಸಚಿವರು ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ಟೀಕಿಸಿದ್ದರು.
ಇದನ್ನೂ ಓದಿ: ಭಾರತಕ್ಕೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ ಪಾಕಿಸ್ತಾನ ಸಚಿವೆ