ವಯನಾಡು (ಕೇರಳ): "ನೀನು ನನ್ನ ಮಗ. ದೇವರು ನಿನ್ನನ್ನು ಆಶೀರ್ವದಿಸಲಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವರ ಜನನವನ್ನು ಕಣ್ಣಾರೆ ಕಂಡಿದ್ದ ಕೇರಳದ ದಾದಿಯ ಮನದಾಳ ಹಾಗೂ ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ರಾಜಮ್ಮ ವಾವತಿಲ್ ಎಂಬ ವೃದ್ಧೆಯನ್ನು ಭೇಟಿ ಮಾಡಿದರು. ರಾಜಮ್ಮ ವಾವತಿಲ್ ಇವರು 1970ರ ಜೂನ್ 19 ರಂದು ರಾಹುಲ್ ಗಾಂಧಿ ಹುಟ್ಟಿನ ವೇಳೆ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಾಗಾ ಹುಟ್ಟಿದಾಗ ಮಗುವನ್ನು ತಮ್ಮ ಕೈಯಲ್ಲಿ ಹಿಡಿದಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿ ಅವರನ್ನು ವಯನಾಡಿನಲ್ಲಿ ನೋಡಿದ ರಾಜಮ್ಮ, ಸಿಹಿತಿಂಡಿಯ ಪ್ಯಾಕೆಟ್ ಅನ್ನು ರಾಹುಲ್ಗೆ ಕೊಟ್ಟು ಪ್ರೀತಿಯಿಂದ ಶುಭ ಹಾರೈಸಿದರು. ಅಲ್ಲದೇ ತಮ್ಮ ಮಗನನ್ನು ರಾಹುಲ್ ಗಾಂಧಿಗೆ ಪರಿಚಯಿಸಿದರು. "ಇವರು ನನ್ನ ಕಣ್ಮುಂದೆ ಜನಿಸಿದವರು. ನೀವೆಲ್ಲಾ ಇವರನ್ನು ನೋಡುವ ಮುಂಚೆಯೇ ನಾನು ನೋಡಿದ್ದೆ. ನನ್ನ ಈ ಸ್ಥಾನವನ್ನ ಯಾರಿಗೂ ನಾನು ಕೊಡುವುದಿಲ್ಲ" ಎಂದು ರಾಹುಲ್ ಬಳಿ ಹೇಳಿಕೊಂಡರು.
ಇದನ್ನೂ ಓದಿ:ವೃದ್ಧಾಶ್ರಮದಲ್ಲಿ 'ಓಣಂ ಸಾದ್ಯ' ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
"ನೀನು ನನ್ನ ಮಗ. ದೇವರು ನಿನ್ನನ್ನು ಆಶೀರ್ವದಿಸಲಿ. ನಿಮ್ಮ ತಾಯಿಗೆ ನನ್ನ ವಂದನೆಗಳನ್ನು ತಿಳಿಸಿ" ಎಂದು ಸೋನಿಯಾ ಗಾಂಧಿಯವರ ಬಗ್ಗೆ ಕೇಳುತ್ತಾ ರಾಹುಲ್ ಗಾಂಧಿಗೆ ರಾಜಮ್ಮ ಶುಭ ಹಾರೈಸಿದರು. ಈ ದೃಶ್ಯದ ವಿಡಿಯೋವನ್ನು 'ಕೇರಳ ಕಾಂಗ್ರೆಸ್' ತನ್ನ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಲೈಕ್ ಮತ್ತು ರಿಟ್ವೀಟ್ ಮಾಡುತ್ತಿದ್ದಾರೆ.