ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅದೊಂದು "ಕ್ರಿಮಿನಲ್ ವೇಸ್ಟ್" ಎಂದು ಕರೆದಿದ್ದಾರೆ.
ಸೆಂಟ್ರಲ್ ವಿಸ್ಟಾ ಯೋಜನೆ ಒಂದು ಕ್ರಿಮಿನಲ್ ವೇಸ್ಟ್. ಅದರ ಬದಲು ಜನರ ಜೀವನವನ್ನು ಕೇಂದ್ರವಾಗಿಸಿಕೊಳ್ಳಿ. ಜನರ ಜೀವ ಉಳಿಸಲು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಿ. ವೈದ್ಯಕೀಯ ಮೂಲ ಸೌಕರ್ಯಗಳನ್ನು ಸುಧಾರಿಸಲು ಆದ್ಯತೆ ನೀಡಿ. ನಿಮ್ಮ ಕುರುಡು ದುರಹಂಕಾರವನ್ನು ಬಿಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕರದ ಈ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯು ದೇಶದ ವಿದ್ಯುತ್ ಕಾರಿಡಾರ್, ಹೊಸ ಟ್ರಯಾಂಗಲ್ ಸಂಸತ್ತು ಕಟ್ಟಡ, ಸಾಮಾನ್ಯ ಕೇಂದ್ರ ಕಾರ್ಯದರ್ಶಿ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ಗೆ ಮೂರು ಕಿ.ಮೀ. ಉದ್ದದ ರಾಜ್‌ಪಥ್ ನವೀಕರಣ ಪ್ರಧಾನಿ ಹಾಗೂ ಉಪರಾಷ್ಟ್ರಪತಿಗಳಿಗೆ ಹೊಸ ನಿವಾಸಗಳ ನಿರ್ಮಾಣವನ್ನು ಒಳಗೊಂಡಿದೆ. ಈ ಯೋಜನೆಗಾಗಿ ಸಿಪಿಡಬ್ಲ್ಯುಡಿ 11,794 ಕೋಟಿಯಿಂದ 13,450 ಕೋಟಿ ರೂ.ಗಳ ತನ್ನ ಅಂದಾಜು ವೆಚ್ಚವನ್ನು ಪರಿಷ್ಕರಿಸಿದೆ.
ಇದನ್ನೂ ಓದಿ: ಭಾರತಕ್ಕೆ ನೆದರ್ಲ್ಯಾಂಡ್ ನೆರವು: ವೆಂಟಿಲೇಟರ್, ಸಾಂದ್ರಕ ಹೊತ್ತ ವಿಮಾನ ಆಗಮನ
ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಕೇಂದ್ರ ಸರ್ಕಾರವು ಅಗತ್ಯ ಸೇವೆಗಳ ಟ್ಯಾಗ್ನಲ್ಲಿರಿಸಿರುವುದನ್ನು ರಾಹುಲ್ ಕಟುವಾಗಿ ಟೀಕಿಸಿದ್ದಾರೆ. ಸರ್ಕಾರದ ಆದ್ಯತೆಯು ತಪ್ಪಾಗಿದೆ ಎನ್ನುವುದರ ಸೂಚನೆ ಇದು ಎಂದಿದ್ದಾರೆ. ನವದೆಹಲಿಯಲ್ಲಿ ಲಾಕ್ಡೌನ್ ಹೊರತಾಗಿಯೂ ಯೋಜನೆಯ ಕಾಮಗಾರಿ ಮುಂದುವರೆದಿದೆ. ಯೋಜನೆಯ ನಿರ್ಮಾಣ ಕಾರ್ಯಗಳನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತರಲಾಗಿದ್ದು, ಕೇಂದ್ರದ ಈ ನಡೆ ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.