ನವದೆಹಲಿ:ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ವೇಳೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸಂಸತ್ತಿನಲ್ಲಿ ವಾಗ್ಯುದ್ಧ ನಡೆಯಿತು. ಮಸೂದೆಯಲ್ಲಿ ಒಬಿಸಿಗಳಿಗೆ ನೀಡಿರುವ ಆದ್ಯತೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸುವಾಗ ಸದನ ಕಾವೇರಿತ್ತು.
ಮೀಸಲಾತಿ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರದಲ್ಲಿ ಒಬಿಸಿಗಳಿಗೆ ಎಷ್ಟು ಪ್ರತಿಶತ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗವನ್ನು ಸರ್ಕಾರ ಮೂಲೆಗುಂಪು ಮಾಡಿದೆ ಎಂದೆಲ್ಲಾ ಟೀಕಕಾಪ್ರಹಾರ ನಡೆಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಟ್ಟ ಉತ್ತರ ನೀಡಿದರು.
ರಾಹುಲ್ ಪ್ರಶ್ನೆಯೇನು?:ಮಹಿಳಾ ಮೀಸಲಾತಿ ಕುರಿತ ಚರ್ಚೆಯ ವೇಳೆ ರಾಹುಲ್ ಜಾತಿ ಗಣತಿಯನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಆದಷ್ಟು ಬೇಗ ಜಾತಿ ಗಣತಿಯನ್ನು ನಡೆಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿರುವ ಸರ್ಕಾರ ಸೆಕ್ರೆಟರಿಗಳ ಮೂಲಕ ನಡೆಯುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ 90 ಸೆಕ್ರೆಟರಿಗಳಲ್ಲಿ ಕೇವಲ ಮೂವರು ಮಾತ್ರ ಒಬಿಸಿ ಸಮುದಾಯದವರಾಗಿದ್ದಾರೆ. ಇದ ಆಘಾತಕಾರಿ ಸಂಗತಿ ಎಂದು ಹೇಳಿದರು.
ದೇಶದಲ್ಲಿ ಎಷ್ಟು ಹಿಂದುಳಿದ ವರ್ಗದವರಿದ್ದಾರೆ. ಎಷ್ಟು ದಲಿತರಿದ್ದಾರೆ. ಆದಿವಾಸಿಗಳು ಎಷ್ಟು ಎಂಬ ಪ್ರಶ್ನೆಗೆ ಜಾತಿ ಎಣಿಕೆಯೊಂದೇ ಉತ್ತರ ನೀಡಬಲ್ಲದು. ಹೀಗಾಗಿ ಆದಷ್ಟು ಬೇಗ ಜಾತಿ ಗಣತಿಯನ್ನು ಮಾಡಿಸಬೇಕು. ಅದರ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಬಾರಿ ನಮ್ಮ ಸರ್ಕಾರ ಬರಲಿದೆ. ಆಗ ನಾವು ಮಾಡಿಸುತ್ತೇವೆ. ಅದೆಲ್ಲಕ್ಕೂ ಮೊದಲು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಎಂದು ರಾಹುಲ್ ಗುಡುಗಿದರು.