ಕರ್ನಾಟಕ

karnataka

ETV Bharat / bharat

ಶ್ರೀನಗರದ ಲಾಲ್​ಚೌಕ್​ನಲ್ಲಿ ರಾಹುಲ್​ ಗಾಂಧಿ ಧ್ವಜಾರೋಹಣ: ನಾಳೆ ಭಾರತ್​ ಜೋಡೋ ಕೊನೆ ದಿನ - ಲಾಲ್​ಚೌಕ್​ನಲ್ಲಿ ರಾಹುಲ್​ ಧ್ಜಜಾರೋಹಣ

ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ನಡೆಸುತ್ತಿರುವ ಭಾರತ್​ ಜೋಡೋ ಯಾತ್ರೆ ನಾಳೆ ಸಂಪನ್ನವಾಗಲಿದೆ. ಇಂದು ಶ್ರೀನಗರದ ಲಾಲ್​ಚೌಕ್​ನಲ್ಲಿ ಅವರು ಧ್ವಜಾರೋಹಣ ಮಾಡಿದರು.

bharat-jodo-yatra
ನಾಳೆ ಭಾರತ್​ ಜೋಡೋ ಸಂಪನ್ನ

By

Published : Jan 29, 2023, 12:58 PM IST

ಶ್ರೀನಗರ:ಕಳೆದ ಐದು ತಿಂಗಳಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ನಡೆಸುತ್ತಿರುವ ಭಾರತ್​ ಜೋಡೋ ಯಾತ್ರೆ ನಾಳೆ ಸಂಪನ್ನವಾಗಲಿದ್ದು, ಇಂದು ಶ್ರೀನಗರದ ಪಂಥಾಚೌಕ್​ನಿಂದ ಪುನಾರಂಭಗೊಂಡಿತು. ಇದೀಗ ಯಾತ್ರೆ ಲಾಲ್​ಚೌಕ್​ ತಲುಪಿದ್ದು, ರಾಹುಲ್​ ಗಾಂಧಿ ಧ್ವಜಾರೋಹಣ ನೆರವೇರಿಸಿದರು. ಶುಕ್ರವಾರ ಭದ್ರತಾ ಲೋಪದ ಕಾರಣ ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ 3 ಸ್ತರದ ಭದ್ರತೆ ನೀಡಲಾಗಿದೆ.

ಪಂಥಾಚೌಕ್​ನಿಂದ ಬೆಳಗ್ಗೆ 10:45ಕ್ಕೆ ಶುರುವಾದ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಅವರೊಂದಿಗೆ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಜ್ಜೆ ಹಾಕಿದರು. ತ್ರಿವರ್ಣ ಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಕಾರ್ಯಕರ್ತರು ಜೈಕಾರದೊಂದಿಗೆ ಉತ್ಸಾಹದಿಂದ ನಡಿಗೆಯಲ್ಲಿ ಭಾಗವಹಿಸಿದರು. ಯಾತ್ರೆಯು ಸೋನ್ವಾರ್ ಪ್ರದೇಶದವರೆಗೆ 7 ಕಿಲೋಮೀಟರ್ ದೂರ ಕ್ರಮಿಸಿ, ಅಲ್ಪಕಾಲದ ವಿಶ್ರಾಂತಿಯ ಬಳಿಕ ಲಾಲ್ ಚೌಕ್​ಗೆ ಬಂದಿತು.

ಲಾಲ್​ಚೌಕ್​ನಲ್ಲಿ ಹಾರಿದ ತಿರಂಗಾ:ಯಾತ್ರೆ ಲಾಲ್​​ಚೌಕ್​ಗೆ ಆಗಮಿಸಿದ ಬಳಿಕ ನಿಗದಿಯಂತೆ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ನೂರಾರು ಕಾರ್ಯಕರ್ತರು ರಾಷ್ಟ್ರಗೀತೆ ಹಾಡಿದರು. ಬಳಿಕ ಅಲ್ಲಿಂದ ಯಾತ್ರೆ ಮುಂದುವರಿಯಿತು.

ಯಾತ್ರೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಲಾಲ್​ಚೌಕ್​ನ ಸಂಪೂರ್ಣ ಪ್ರದೇಶದ ಸುತ್ತಲೂ ಮೂರು ಪದರದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಲಾಲ್​ಚೌಕ್ ನಂತರ ಯಾತ್ರೆಯು ನಗರದ ಬೌಲೆವಾರ್ಡ್ ಪ್ರದೇಶದಲ್ಲಿರುವ ನೆಹರೂ ಪಾರ್ಕ್‌ಗೆ ಆಗಮಿಸಲಿದೆ. ನಾಳೆ ಇಲ್ಲಿನ ಎಂ.ಎ.ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಹುಲ್​ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ನಂತರ ಎಸ್‌.ಕೆ.ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಕಾರ್ಯಕ್ರಮಕ್ಕೆ 23 ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ಬಳಿಕ 5 ತಿಂಗಳಿಂದ ನಡೆಯುತ್ತಿರುವ ಯಾತ್ರೆ ಸಮಾರೋಪ ಕಾಣಲಿದೆ.

ರಾಹುಲ್​​ ಯಾತ್ರೆಯ ಉದ್ದಗಲ:ಕಳೆದಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ರಾಹುಲ್​ ಯಾತ್ರೆಯು ದೇಶದ 75 ಜಿಲ್ಲೆಗಳಲ್ಲಿ ಸಂಚರಿಸಿದೆ. 4,080 ಕಿ.ಮೀ.ಗೂ ಅಧಿಕ ದೂರ ಈಗಾಗಲೇ ಕ್ರಮಿಸಿ ಬಂದಿದೆ. ಯಾತ್ರೆ 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ತಮಿಳುನಾಡು ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ, ರಾಜಸ್ಥಾನ, ಪಂಜಾಬ್​, ಹರಿಯಾಣ ಸೇರಿದಂತೆ 12 ರಾಜ್ಯಗಳನ್ನು ಹಾದು ಹೋಗಿದೆ.

ಜಮ್ಮು ಕಾಶ್ಮೀರ ನಾಯಕರ ಬೆಂಬಲ:ಯಾತ್ರೆಯುದ್ದಕ್ಕೂ ಚಿತ್ರರಂಗ, ಕ್ರೀಡೆ, ವಿವಿಧ ರಾಜಕೀಯ ನಾಯಕರ ಬೆಂಬಲ ಪಡೆದಿರುವ ರಾಹುಲ್​ ಗಾಂಧಿಗೆ, ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯ ನಾಯಕರೂ ಸಾಥ್​ ನೀಡಿದ್ದಾರೆ. ಮಾಜಿ ಸಿಎಂಗಳಾದ ಓಮರ್​ ಅಬ್ದುಲ್ಲಾ, ಫಾರೂಕ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಅವರು ಯಾತ್ರೆಯಲ್ಲಿ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಭಾರತ್​ ಜೋಡೋದಿಂದ ಎಸ್‌ಪಿ, ಜೆಡಿಯು ದೂರ:ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರತ್​ ಜೋಡೋ ಸಂಪನ್ನ ಕಾರ್ಯಕ್ರಮದಲ್ಲಿ ಭಾಗವಹಿಸಲು 23 ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಆದರೆ, ಜೆಡಿಯು, ಎಸ್​ಪಿ, ಟಿಡಿಪಿ ಸೇರಿದಂತೆ ಹಲವು ಪಕ್ಷಗಳು ನಾಳೆ ನಡೆಯುವ ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಎಸ್‌ಪಿ, ಬಿಎಸ್‌ಪಿ, ಜೆಡಿಯು ಟಿಡಿಪಿ ಮತ್ತು ಸಿಪಿಐ(ಎಂ) ಪಕ್ಷಗಳು ರ್ಯಾಲಿಯಲ್ಲಿ ಭಾಗಯಾಗುತ್ತಿಲ್ಲ. ಸಿಪಿಐ(ಎಂ) ಇದುವರೆಗೆ ಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಯು ಕೂಡ ಯಾತ್ರೆಯಿಂದ ದೂರ ಸರಿಯಲಿದೆ ಎಂದು ಹೇಳಲಾಗಿದೆ.

ಜನವರಿ ಮೊದಲ ವಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು, ಸಮಾನ ಮನಸ್ಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಜನತಾ ದಳ(ಯುನೈಟೆಡ್), ಶಿವಸೇನೆ, ತೆಲುಗು ದೇಶಂ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಡಿಎಂಕೆ, ಸಿಪಿಐ, ಸಿಪಿಐ(ಎಂ), ಜಾರ್ಖಂಡ್ ಮುಕ್ತಿ ಮೋರ್ಚಾ, ಆರ್‌ಜೆಡಿ, ಆರ್​ಎಲ್​ಡಿ, ಹಿಂದೂಸ್ತಾನಿ ಅವಾಮ್ ಮೋರ್ಚಾ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಎಂಡಿಎಂಕೆ, ವಿಸಿಕೆ, ಐಯುಎಂಎಲ್​, ಕೆಎಸ್​ಎಂ, ಆರ್​ಎಸ್​​ಪಿ ಪಕ್ಷಗಳಿಗೆ ಕಳುಹಿಸಿದ ಪತ್ರದಲ್ಲಿ ಜನವರಿ 30 ರಂದು ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ:'ದೇಶ ಒಡೆಯುವ ಶಕ್ತಿಗಳಿಂದ ಎಚ್ಚರದಿಂದಿರಿ': ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪರೋಕ್ಷ ಟೀಕೆ

ABOUT THE AUTHOR

...view details