ನವದೆಹಲಿ:2019 ರ ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ಜಾಮೀನು ಪಡೆದ ರಾಹುಲ್ ಗಾಂಧಿ, "ಇದು ಸತ್ಯ ಮತ್ತು ಧರ್ಮಕ್ಕಾದ ಜಯ" ಎಂದು ಬಣ್ಣಿಸಿದ್ದಾರೆ. ರಾಹುಲ್ ವಿರುದ್ಧ ಕೇಸ್ ದಾಖಲಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕೋರ್ಟ್ ತೀರ್ಪು ಸ್ವಾಗತಿಸಿದ್ದರೆ, ಕಾಂಗ್ರೆಸ್ ನಾಯಕರು ರಾಹುಲ್ ಬೆನ್ನಿಗೆ ನಿಂತಿದ್ದಾರೆ.
ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಪ್ರಕರಣದ ತೀರ್ಪು ಹೊರಬಿದ್ದಿದ್ದು, ದೋಷಿ ಎಂದು ಪರಿಗಣಿತವಾಗಿದ್ದ ರಾಹುಲ್ ಅವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಯಿತು. ಬಳಿಕ ಕಾಂಗ್ರೆಸ್ ನಾಯಕನ ಮನವಿಯ ಮೇರೆಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಗಡುವು ಕೂಡ ನೀಡಿದೆ.
ಮಹಾತ್ಮ ಗಾಂಧಿ ಹೇಳಿಕೆ ಟ್ವೀಟ್:ಪ್ರಕರಣದ ತೀರ್ಪು ಪ್ರಕಟವಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೇಳಿಕೆಯಾದ "ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ. ಸತ್ಯವೇ ನನ್ನ ದೇವರು, ಅಹಿಂಸೆಯೇ ಸತ್ಯವನ್ನು ಪಡೆಯುವ ಸಾಧನ ಎಂದು ಟ್ವೀಟಿಸಿದ್ದಾರೆ. ಅಂದರೆ, ಸತ್ಯ ಮತ್ತು ಅಹಿಂಸೆಯಿಂದ ಮಾತ್ರ ಎಲ್ಲವನ್ನು ಜಯಿಸಲು ಸಾಧ್ಯ ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕೋರ್ಟ್ ತೀರ್ಪಿಗೆ ಅರ್ಜಿದಾರರಿಂದ ಸ್ವಾಗತ:ರಾಹುಲ್ ಗಾಂಧಿ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ದೂರು ದಾಖಲಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ರಾಹುಲ್ ಅವರು ನೀಡಿದ ಹೇಳಿಕೆ ಅವರು ನಿಂದಿಸಿದ ಹೆಸರಿನವರ ಮಾನಹಾನಿ ಮಾಡಿತ್ತು. ಹೀಗಾಗಿ ಅವರ ವಿರುದ್ಧ ಕೇಸ್ ದಾಖಲಿಸಿದ್ದೆ. ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದರು.