ನವದೆಹಲಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗಿಂತ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಇದಕ್ಕೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ನಗರ ಸಭೆ, ಪುರಸಭೆ,ಪಟ್ಟಣ ಪಂಚಾಯ್ತಿಗೆ ಡಿಸೆಂಬರ್ 27ರಂದು ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಇಂದು ಬಹಿರಂಗಗೊಂಡಿದ್ದು, ಪಟ್ಟಣ ಪಂಚಾಯಿತಿಯ ಒಟ್ಟು 577 ಸ್ಥಾನಗಳ ಪೈಕಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ 194 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ. ಜೆಡಿಎಸ್ ಪಕ್ಷ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.
ಒಟ್ಟು 1,184 ವಾರ್ಡ್ಗಳ ಪೈಕಿ ಕಾಂಗ್ರೆಸ್ 498, ಬಿಜೆಪಿ 437 ಜೆಡಿಎಸ್ 45 ಹಾಗೂ ಇತರ 204 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತರೂಢ ಪಕ್ಷ ಬಿಜೆಪಿಯಾಗಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದಕ್ಕಾಗಿ ಪಕ್ಷದ ಮುಖಂಡ ರಾಹುಲ್ ಗಾಂಧಿ ವೆಲ್ ಡನ್ ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ್ ಅಭಿನಂದನೆ ಸಲ್ಲಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ನಮಗೆ ಆಶೀರ್ವಾದ ಮಾಡಿದ ಎಲ್ಲ ಕನ್ನಡಿಗ ಸಹೋದರ - ಸಹೋದರಿಯರಿಗೆ ಕಾಂಗ್ರೆಸ್ ಪಕ್ಷ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತದೆ.
ಜನಸಾಮಾನ್ಯರನ್ನು ತಲುಪಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಕಾರ್ಯ ವೈಖರಿಯನ್ನು ಪಕ್ಷವು ವಿಶೇಷವಾಗಿ ಶ್ಲಾಘಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಇದನ್ನೂ ಓದಿರಿ:ಇದೆಂಥಾ ವಿಚಿತ್ರ..! 'ಪ್ಲಾಸ್ಟಿಕ್ ಮಗು'ವಿಗೆ ಜನ್ಮ ನೀಡಿದ ತಾಯಿ..!!
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಪ್ರಬಲವಾಗಿ ಮುಂದುವರೆಯುತ್ತೇವೆ ಎಂದು ಡಿಕೆಶಿ ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಣ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನ ಕರ್ನಾಟಕದ ಜನತೆ ಸಾಬೀತು ಮಾಡಿದ್ದಾರೆಂದು ಸಿದ್ದರಾಮಯ್ಯ ಟ್ವೀಟರ್ನಲ್ಲಿ ಹೇಳಿಕೊಂಡಿದ್ದಾರೆ.