ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಅಸ್ಸೋಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಶಿವಸಾಗರದಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ.
ಈ ವರ್ಷ ಅಸ್ಸೋಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೊದಲ ಭೇಟಿ ಇದಾಗಿದೆ. ವಿಶೇಷವೆಂದರೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ಐದು ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಕಳೆದ ತಿಂಗಳು ಘೋಷಿಸಿತ್ತು.
ಇದನ್ನೂ ಓದಿ:ಶಾಕಿಂಗ್: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಭಗ್ನ ಪ್ರೇಮಿ! ವಿಡಿಯೋ
ಜನವರಿ 20 ರಂದು ಗುವಾಹಟಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಸ್ಸೋಂ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ, ಮುಂಬರುವ ಅಸ್ಸೋಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಿಪಿಎಂ (ಮಾರ್ಕ್ಸ್‌ವಾದಿ) , ಸಿಪಿಐ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಮತ್ತು ಅಂಚಲಿಕ್ ಗಾನಾ ಮೋರ್ಚಾ ಎಲ್ಲವೂ ಒಟ್ಟಾಗಿ ಸೇರಿ ಬಿಜೆಪಿಯನ್ನು ಸೋಲಿಸಲು ಹೋರಾಡಲಿವೆ. ಇತರ ಪ್ರಾದೇಶಿಕ ಮತ್ತು ಬಿಜೆಪಿ ವಿರೋಧಿ ಪಕ್ಷಗಳು ನಮ್ಮೊಂದಿಗೆ ಸೇರಲು ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದರು.
126 ಸ್ಥಾನಗಳಿರುವ ಅಸ್ಸೋಂ ವಿಧಾನಸಭೆಯ ಚುನಾವಣೆ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆದಾಗ್ಯೂ, ಚುನಾವಣಾ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.