ಶಾಮ್ಲಿ(ಉತ್ತರ ಪ್ರದೇಶ): ಅಂದು ಶಂಕರಾಚಾರ್ಯರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋಗಿದ್ದರು, ಇಂದು ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ 111ನೇ ದಿನವಾದ ಇಂದು ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬ್ರಿಜ್ಲಾಲ್ ಖಬ್ರಿ, ಆರಾಧನಾ ಮಿಶ್ರಾ, ಅಖಿಲೇಶ್ ಪ್ರತಾಪ್ ಸಿಂಗ್ ಅವರು ಶಾಮ್ಲಿಯ ಉಚಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಪಕ್ಷದ ನಾಯಕರು, ಇಲ್ಲಿಯವರೆಗಿನ ಭಾರತ್ ಜೋಡೋ ಪಯಣದ ಬಗ್ಗೆ ವಿವರಿಸುತ್ತ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ಯುಪಿಯ 23 ಭಾರತ ಯಾತ್ರಿಗಳ ಬಗ್ಗೆಯೂ ಮಾಹಿತಿ ನೀಡಿದರು.
2300 ಕಿ ಮೀ ದೂರ ಕ್ರಮಿಸಿದ ಭಾರತ್ ಜೋಡೋ ಯಾತ್ರೆ:ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಭಾರತ್ ಜೋಡೋ ಯಾತ್ರೆ ಇದುವರೆಗೆ 54 ಜಿಲ್ಲೆಗಳನ್ನು ದಾಟಿಕೊಂಡು ಬಂದು 2300 ಕಿಲೋ ಮೀಟರ್ ಕ್ರಮಿಸಿದೆ. ಕಳೆದ ಮೂರು ದಿನಗಳಿಂದ, ಈ ಪ್ರಯಾಣವು ಉತ್ತರ ಪ್ರದೇಶದ ಗಾಜಿಯಾಬಾದ್, ಬಾಗ್ಪತ್ ಮತ್ತು ಪ್ರಸ್ತುತ ಶಾಮ್ಲಿ 3 ಜಿಲ್ಲೆಗಳಲ್ಲಿದೆ. ನಾಳೆಯಿಂದ ನಾಲ್ಕೈದು ದಿನ ಹರಿಯಾಣದಲ್ಲಿ ಯಾತ್ರೆ ಸಾಗಲಿದೆ. ಜನವರಿ 12 ಮತ್ತು 13 ವಿಶ್ರಾಂತಿ ದಿನಗಳು. ನಂತರ ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಒಂದು ದಿನದ ಪ್ರಯಾಣ ನಡೆಯಲಿದೆ. ಇದಾದ ಬಳಿಕ ಸುಮಾರು 7 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ನಡೆಯಲಿದೆ. ಜ. 30ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದು, ಇದರೊಂದಿಗೆ ಈ ಪ್ರಯಾಣ ಪೂರ್ಣಗೊಳ್ಳಲಿದೆ ಎಂದು ಜೈರಾಮ್ ರಮೇಶ್ ತಿಳಿಸಿದರು.
2023ರಲ್ಲಿ ಪಶ್ಚಿಮದಿಂದ ಪೂರ್ವ ಭಾರತಕ್ಕೆ ಜೋಡೋ ಯಾತ್ರೆ:ಇದು ಟೊಯೋಟಾ ಅಥವಾ ಇನ್ನೋವಾ ಯಾತ್ರೆಯಲ್ಲ. ಪ್ರಮುಖ ಯಾತ್ರೆಯ ಹೊರತಾಗಿ, ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪಕ್ಷವು ಈಗಾಗಲೇ ಯಾತ್ರೆಯನ್ನು ಕೈಗೊಂಡಿದೆ. ಪಾರ್ಟಿ 2023 ರಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳಲಿದೆ. ಇದರಲ್ಲಿ ಮುಖ್ಯ ಯಾತ್ರೆಯಿಂದ ಹೊರಗುಳಿದಿರುವ ಜಿಲ್ಲೆಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದರು.