ನವದೆಹಲಿ:ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಲವಾಗಿ ಪ್ರತಿಪಾದಿಸಿದರು. ಜನಗಣತಿ ಮತ್ತು ಸೀಮಾರೇಖೆಯ ಷರತ್ತುಗಳನ್ನು ಸೇರಿಸುವುದನ್ನು ಟೀಕಿಸಿದರು. ಈ ಷರತ್ತುಗಳು ಮಸೂದೆಯ ಅನುಷ್ಠಾನವನ್ನು ಅನಗತ್ಯವಾಗಿ ವಿಳಂಬಗೊಳಿಸುತ್ತವೆ ಎಂದು ಕಿಡಿಕಾರಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರ್ಕಾರ ಜಾತಿವಾರು ಜನಗಣತಿ ನಡೆಸಬೇಕು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ಗಣತಿ ಮಾಹಿತಿ ಬಿಡುಗಡೆ ಮಾಡಬೇಕು'' ಎಂದು ಒತ್ತಾಯಿಸಿದರು. ''ಮಹಿಳೆಯರಿಗೆ ಇಂದೇ ಮೀಸಲಾತಿ ನೀಡಬಹುದು, ಆದರೆ, ಸರ್ಕಾರ ಅದನ್ನು ಮಾಡಲು ಬಯಸುವುದಿಲ್ಲ. ಗಮನ ಬೇರೆಡೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಒಬಿಸಿ ಜನಗಣತಿಯಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಭಾರತ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಒಬಿಸಿ ವರ್ಗದ ಮೂವರು ಮಾತ್ರೆ ಏಕೆ ಇದ್ದಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು'' ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
ದಿಕ್ಕು ತಪ್ಪಿಸುವ ತಂತ್ರ ಬಳಸುತ್ತಿರುವ ಸರ್ಕಾರ:ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಬೆಂಬಲ ಸೂಚಿಸಿದ ಅವರು, ವಿಧೇಯಕ ಜಾರಿ ವಿಳಂಬವನ್ನು ಟೀಕಿಸಿದರು. ''ಸತ್ಯಾಂಶವೆಂದರೆ ಈ ಮೀಸಲಾತಿಯನ್ನು ಇಂದೇ ಜಾರಿಗೊಳಿಸಬಹುದು. ಹಾಗೆ ಮಾಡಲು ಸರ್ಕಾರದ ಹಿಂಜರಿಯುತ್ತಿದೆ. ಇದಲ್ಲದೆ, ನಿರ್ಣಾಯಕ ಜಾತಿ ಜನಗಣತಿಗಿಂತ ಮಹಿಳಾ ಮೀಸಲಾತಿ ಮಸೂದೆಗೆ ಆದ್ಯತೆ ನೀಡುವ ಮೂಲಕ ಸರ್ಕಾರವು ದಿಕ್ಕು ತಪ್ಪಿಸುವ ತಂತ್ರಗಳನ್ನು ಬಳಸುತ್ತಿದೆ'' ಎಂದು ಆರೋಪಿಸಿದರು.