ನವದೆಹಲಿ:ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದ ಸಂದರ್ಭದ ವಿಡಿಯೋವನ್ನು ರಾಷ್ಟ್ರೀಯ ಕಾಂಗ್ರೆಸ್ x ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗಳು ಮಿಸಾ ಭಾರತಿ ಅವರ ಜೊತೆ ಮಟನ್ ಅಡುಗೆ ಮಾಡುತ್ತ, ರಾಜಕೀಯದ ಬಗ್ಗೆ ಮಾತನಾಡುತ್ತಿರುವದನ್ನು ಗಮನಿಸಬಹುದಾಗಿದೆ.
ಗಾಂಧಿ ಕುಟುಂಬಕ್ಕೆ ಲಾಲು ಯಾದವ್ ಅವರ ಆಪ್ತತೆ ಹೊಸತಲ್ಲ. ಇವರ ಜೊತೆಗಿನ ಫೋಟೋ ವಿಡಿಯೋ ಇವರ ನಡುವಿನ ಸೌಹಾರ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ವಿಡಿಯೋ ಕುರಿತು ಲಾಲು ಯಾದವ್ ಅವರೊಂದಿಗೆ ಕುರಿ ಮಾಂಸ ಮತ್ತು ರಾಜಕೀಯ ಮಸಾಲೆಗಳನ್ನು ತಯಾರಿಸುವ ರಹಸ್ಯ ಪಾಕ ವಿಧಾನವನ್ನು ಚರ್ಚಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಂಚಿಕೊಂಡಿರುವ ವಿಡಿಯೋವು ಆರ್‌ಜೆಡಿ ಸಂಸದ ಮಿಸಾ ಭಾರತಿ ಅವರ ನಿವಾಸದಿಂದ ಬಂದಿದೆ. ಇವರ ನಿವಾಸಕ್ಕೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಅಲ್ಲಿ ಲಾಲು ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಹುಲ್ಗೆ ಲಾಲು ಅವರು ಚಂಪಾರಣ್ ಮಟನ್ ಮಾಡಲು ಕಲಿಸಿದ್ದಾರೆ. ರಾಹುಲ್ ಗಾಂಧಿ ಎಷ್ಟು ಪದಾರ್ಥ ಬಳಸಬೇಕು ಎಂದಾಗ ಅವರ ಕೈಗೆ ಬೆಳ್ಳುಳ್ಳಿ ಪೇಸ್ಟ್ ಕೊಟ್ಟು ಹೆಚ್ಚಿದ್ದ ಈರುಳ್ಳಿಗೆ ಹಾಕಲು ಹೇಳಿದರು. ಬಳಿಕ ಸ್ವತಃ ರಾಹುಲ್ ಗಾಂಧಿಯೇ ಅದನ್ನು ಮಿಶ್ರಣ ಮಾಡಿದರು. ಇವರಿಗೆ ಮಿಸಾ ಭಾರತಿ ಕೂಡ ಸಹಾಯ ಮಾಡಿದ್ದಾರೆ. ಉಳಿದ ನಾಯಕರಾದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಇತರರು ಅವರ ಬಳಿಯೇ ಇದ್ದರು.