ನವದೆಹಲಿ:ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮನ್ನು ನಿರಂತರವಾಗಿ ವಿಚಾರಣೆ ನಡೆಸಿದ ಬಗೆಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮ್ಯಾರಥಾನ್ ಪ್ರಶ್ನೋತ್ತರ ಅವಧಿಯನ್ನು ನಿಭಾಯಿಸಲು ವಿಪಾಸ್ಸನ(ಧ್ಯಾನ) ಕಾರಣವಾಯಿತು. 'ಇದನ್ನು ನೀವೂ ಕಲಿಯಿರಿ' ಎಂದು ಇಡಿ ಅಧಿಕಾರಿಗಳಿಗೇ ರಾಹುಲ್ ಸಲಹೆ ನೀಡಿದ್ದಾರಂತೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಇಂದು ಮಾತನಾಡಿದ ರಾಹುಲ್, "ಇಡಿ ಅಧಿಕಾರಿಗಳ ಮ್ಯಾರಥಾನ್ ಪ್ರಶ್ನೋತ್ತರಗಳನ್ನು ತಾಳ್ಮೆ ಮತ್ತು ಸಹಿಷ್ಣುತೆಯಿಂದ ಎದುರಿಸಿದೆ. ಇದನ್ನು ಕಂಡು ತನಿಖಾ ಸಂಸ್ಥೆಯ ಅಧಿಕಾರಿಗಳೇ ದಂಗಾದರು. ಇದು ಹೇಗೆ ಸಾಧ್ಯ ಎಂದು ಕೇಳಿದಾಗ, ರಹಸ್ಯವನ್ನು ಹೇಳಬಾರದು. ನಾನು ವಿಪಸ್ಸನ ಧ್ಯಾನವನ್ನು ಮಾಡುತ್ತೇನೆ. ಹೀಗಾಗಿ ಗಂಟೆಗಟ್ಟಲೆ ನಿರಾಳವಾಗಿ ಕೂರಬಲ್ಲೆ" ಎಂದು ಅವರಿಗೆ ತಿಳಿಸಿದೆ ಎಂದಿದ್ದಾರೆ.
ಮೂವರು ಇಡಿ ಅಧಿಕಾರಿಗಳೊಂದಿಗೆ 5 ದಿನ ಕುಳಿತಿದ್ದರೂ ಅವರು ಎಂದಿಗೂ ಒಂಟಿತನ ಅನುಭವಿಸಲಿಲ್ಲವಂತೆ. ಇದಕ್ಕೆ ಕಾರಣ ಅವರೇ ಹೇಳಿದಂತೆ "ನಾನು ಕೋಣೆಯಲ್ಲಿ ಒಬ್ಬನೇ ಇರಲಿಲ್ಲ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನನ್ನೊಂದಿಗೆ ಜೊತೆಗೆ ಇದ್ದಂತೆ ಇತ್ತು. ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರೆಲ್ಲರೂ ನನ್ನೊಂದಿಗಿದ್ದರು" ಎಂದರು.