ನವದೆಹಲಿ:ಸಂಸತ್ತಿನಿಂದ ಅನರ್ಹವಾದ ಒಂದು ದಿನದ ಬಳಿಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ''ನನ್ನ ಹೆಸರು ರಾಹುಲ್ ಗಾಂಧಿ, ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ'' ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ''ಸತ್ಯಕ್ಕಾಗಿ ಹೋರಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು ನನಗೆ ಇರುವ ಒಂದೇ ಒಂದು ಹೆಜ್ಜೆ. ನಾನು ಯಾವುದೇ ಅಡೆತಡೆಗಳನ್ನು ಲೆಕ್ಕಿಸದೇ ಹೋರಾಟವನ್ನು ಮುಂದುವರಿಸುತ್ತೇನೆ ಎಂದರು.
''ಮೋದಿ ಅವರು ನನ್ನ ಮುಂದಿನ ಭಾಷಣಕ್ಕೆ ಹೆದರುತ್ತಿದ್ದಾರೆ ಎಂದ ಅವರು, ವಿಶೇಷವಾಗಿ ಅದಾನಿ ಗುಂಪಿನ ಬಗ್ಗೆ ಪ್ರಧಾನಿಯಲ್ಲಿ ಭಯ ಕಾಡುತ್ತಿದೆ'' ಎಂದು ದೂರಿದರು. ಅದಾನಿ ಕುರಿತ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಅವರು ಹೆದರಿ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ನಾನು ಕ್ಷಮೆ ಕೇಳುವುದಿಲ್ಲ:ಸಂಸತ್ತಿನಲ್ಲಿ ತನ್ನ ವಿರುದ್ಧ ಮಾಡಲಾದ ಆರೋಪಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮಾತ್ರ ಕೇಳಿದ್ದೆ. ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀವು ಏಕೆ ಕ್ಷಮೆಯಾಚಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ" ಎಂದು ಹೇಳಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಸಂಸತ್ತಿನಿಂದ ಅನರ್ಹತೆಗೆ ಪ್ರತಿಕ್ರಿಯೆ ನೀಡಿದರು. ಹಿಂದಿನ ದಿನ, ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ, ಈ ಯೋಜಿತ ಪತ್ರಿಕಾಗೋಷ್ಠಿ ಬಗ್ಗೆ ಚರ್ಚಿಸಿದ್ದರು.