ನವದೆಹಲಿ (ಭಾರತ): ಲಡಾಖ್‌ನಲ್ಲಿರುವ ಭಾರತದ ಭೂಪ್ರದೇಶದ ಮೇಲೆ ಚೀನಾ ಆಕ್ರಮಣ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಪುನರುಚ್ಚರಿಸಿದ್ದಾರೆ. ''ಚೀನಾದ ತನ್ನ ಇತ್ತೀಚಿನ ಆವೃತ್ತಿಯ 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಸೇರಿದೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ'' ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಪ್ರಧಾನಿ ಮೋದಿ ಅವರು, ಒಂದು ಇಂಚು ಭೂಮಿಯನ್ನು ಆಕ್ರಮಿಸಿಲ್ಲ ಎಂದು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು ಆಗಿದೆ. ಚೀನಾ ಭಾರತೀಯ ಭೂಮಿಯ ಮೇಲೆ ಒಳನುಗ್ಗಿರುವುದು ತಿಳಿದಿದೆ'' ಎಂದು ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನಕ್ಷೆಯ ಪ್ರಶ್ನೆ ಬಹಳ ಗಂಭೀರವಾಗಿದೆ - ರಾಹುಲ್ ಗಾಂಧಿ:ಚೀನಾ ತನ್ನ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ಸೇರಿಸಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ಅವರು, "ನಕ್ಷೆಯ ಪ್ರಶ್ನೆ ಬಹಳ ಗಂಭೀರವಾದದ್ದು, ಆದರೆ, ಅವರು (ಚೀನಾ) ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಧಾನಿ ಕೂಡ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ಕಿಡಿಕಾರಿದರು.
ಚೀನಾ ಸೋಮವಾರ ತನ್ನ "ಸ್ಟ್ಯಾಂಡರ್ಡ್ ಮ್ಯಾಪ್" ನ 2023 ಆವೃತ್ತಿ ಬಿಡುಗಡೆ ಮಾಡಿದೆ. ಇದು ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಪ್ರದೇಶದ ಭಾಗವಾಗಿ ತೋರಿಸುತ್ತದೆ.
ಇಂಚು ಭೂಮಿಯನ್ನೂ ವಶಪಡಿಸಿಕೊಂಡಿಲ್ಲ ಎನ್ನುವುದು ಸತ್ಯಕ್ಕೆ ದೂರ:ಈ ತಿಂಗಳ ಆರಂಭದಲ್ಲಿ, ತಮ್ಮ ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳು ಭಾರತದ ಒಂದಿಂಚು ಭೂಮಿಯನ್ನು ವಶಪಡಿಸಿಕೊಂಡಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾಗಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಚೀನಾ ಸೈನಿಕರಿಂದ ಭಾರತೀಯ ಭೂಪ್ರದೇಶದ ಅತಿಕ್ರಮಣ:ಭಾರತೀಯ ಭೂಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿ ವಶಪಡಿಸಿಕೊಂಡಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದರು. "ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವುದರ ಬಗ್ಗೆ ಇಲ್ಲಿನ ಸ್ಥಳೀಯರು ಚಿಂತಿತರಾಗಿದ್ದಾರೆ. ಚೀನಾದ ಸೈನಿಕರು ಅವರ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಆದರೆ, ಪ್ರಧಾನಿ ಒಂದು ಇಂಚು ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಹೇಳುತ್ತಾರೆ. ಇದು ನಿಜವಲ್ಲ, ನೀವು ಈ ಕುರಿತು ಯಾರನ್ನಾದರೂ ಕೂಡಾ ಕೇಳಬಹುದು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. (ಎಎನ್ಐ)
ಇಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ ಭೇಟಿ:ಮಾಜಿ ಕಾಂಗ್ರೆಸ್ ಅಧ್ಯಕ್ಷರು ಕರ್ನಾಟಕದ ಮೈಸೂರಿಗೆ ತೆರಳುತ್ತಿದ್ದರು. ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಮೈಸೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯಡಿಯಲ್ಲಿ, ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನೀಡಿದ ಐದು ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ನೀಡುವ ಯೋಜನೆ ಇದು.
ಇದನ್ನೂ ಓದಿ:'ಚಂದಮಾಮಾ'ಗೆ ರಕ್ಷಾ ಬಂಧನದ ಶುಭಾಶಯಗಳು: ಮರಳು ಕಲೆಯಲ್ಲಿ ಅರಳಿದ ಭೂಮಿ, ಚಂದ್ರ, ರಾಖಿ ಕಲಾಕೃತಿ