ನವದೆಹಲಿ:ಬಜೆಟ್ ಮೇಲಿನ ಭಾಷಣ ಆರಂಭಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದರು.
ಗಬ್ಬರ ಸಿಂಗ್ ಟ್ಯಾಕ್ಸ್, ರೈತರ ವಿರುದ್ಧದ ಸರ್ಕಾರದ ಧೋರಣೆ, ಕ್ಯಾಪಿಟಲಿಸ್ಟ್ಗಳ ಪರ ಕೇಂದ್ರ ಬ್ಯಾಟಿಂಗ್ ಬಗ್ಗೆ ಕೆಂಡ ಕಾರಿದರು. ಈ ಬಾರಿ ಗಬ್ಬರ ಸಿಂಗ್ ಟ್ಯಾಕ್ಸ್ ಉಚ್ಚಾರಣೆ ಜತೆಗೆ ಹಮ್ ದೋ ಹಮಾರೇ ದೋ ಎಂಬ ಪದ ಬಳಕೆ ಮಾಡಿ ಮೋದಿಗೆ ಟಾಂಗ್ ಕೊಟ್ಟರು.
ಈ ಪದ ಬಳಕೆ ಆಗುತ್ತಿದ್ದಂತೆ ಬಿಜೆಪಿ ಸಂಸದರು, ರಾಹುಲ್ ಅವರೇ ಇದು ಬಜೆಟ್ ಭಾಷಣ, ಬಜೆಟ್ ಬಗ್ಗೆ ಮಾತನಾಡಿ ಎಂದು ಸದನದ ನಡಾವಳಿ ರೂಲ್ಸ್ಗಳನ್ನ ಎತ್ತಿ ತೋರಿಸಿದರು. ಇದ್ಯಾವುದಕ್ಕೂ ಬಗ್ಗದ ರಾಹುಲ್ ಗಾಂಧಿ, ತಮ್ಮ ಪಾಡಿಗೆ ತಾವು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಕೃಷಿ ಸಚಿವರು, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ರೂಲ್ ಬುಕ್ ಓದಿ ರಾಹುಲ್ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ರಾಹುಲ್ ಗಾಂಧಿ ಬೆಂಬಲಕ್ಕೆ ಬಂದ ವಿಪಕ್ಷ ನಾಯಕ ಅಧೀರ್ ರಂಜನ್ ದಾಸ್ ರಾಹುಲ್ ಮಾತುಗಳನ್ನ ಸಮರ್ಥಿಸಿಕೊಂಡರು. ಆಗ ಮತ್ತೆ ಗದ್ದಲ ಏರ್ಪಟ್ಟಿತು. ಈ ವೇಳೆ ಸ್ಪೀಕರ್ ಎರಡೂ ಕಡೆ ಸಂಸದರು ಹಾಗೂ ರಾಹುಲ್ ಗಾಂಧಿಗೂ ನಿಯಮ ಪಾಲಿಸುವಂತೆ ಸೂಚಿಸಿದರು.