ನವದೆಹಲಿ: ಭಾರತವು ಭ್ರಷ್ಟಾಚಾರ ಮತ್ತು ವಂಶ ಪಾರಂಪರ್ಯ ರಾಜಕೀಯ ಎಂಬೆರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದರು.
ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ್ದರು. ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶ ಇದರ ವಿರುದ್ಧ ಹೋರಾಡಬೇಕು. ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕೆಂದು ಅವರು ಕರೆ ನೀಡಿದ್ದಾರೆ.
ಈ ವೇಳೆ ಕುಟುಂಬ ರಾಜಕಾರಣವನ್ನೂ ಟೀಕಿಸಿದ್ದ ಮೋದಿ, ಪರಿವಾರವಾದವು ಕೇವಲ ರಾಜಕೀಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮ್ಮ ಅನೇಕ ಸಂಸ್ಥೆಗಳು ಕೂಡ ಕುಟುಂಬ ರಾಜಕೀಯದ ಪರಿಣಾಮ ಎದುರಿಸುತ್ತಿವೆ. ಪರಿವಾರವಾದವು ನಿಜವಾದ ಪ್ರತಿಭೆಗಳು ಮತ್ತ ರಾಷ್ಟ್ರದ ಸಾಮರ್ಥ್ಯಕ್ಕೆ ಹಾನಿ ಮಾಡುತ್ತಿವೆ. ಇದು ಭ್ರಷ್ಟಾಚಾರ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಎಚ್ಚರಿಸಿದ್ದರು.
ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಕಾಂಗ್ರೆಸ್ ನಾಯಕ ರಾಹುಲ್, "ನಾನು ಇಂತಹ ವಿಷಯಗಳ ಕುರಿತು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು" ಎಂದಷ್ಟೇ ಹೇಳಿದರು.
ಇದನ್ನೂ ಓದಿ:ಜಾಗತಿಕ ಮಟ್ಟದಲ್ಲಿ ಭಾರತ ನ್ಯಾಯಸಮ್ಮತ ವರ್ಚಸ್ಸು ಪಡೆದು ಅನುಭವಿಸುತ್ತಿದೆ: ರಷ್ಯಾಧ್ಯಕ್ಷ ಪುಟಿನ್