ಜೈಪುರ: ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಅಪರಿಚಿತ ಗ್ರಾಮವೊಂದರ ಯುವಕನ ಪ್ರತಿಭೆಗೆ ಬೆರಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುವಕನ ಕನಸು ನನಸಾಗಿಸಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಕೇಳಿಕೊಂಡ ಘಟನೆ ಬುಧವಾರ ನಡೆದಿದೆ.
ಈ ಕುರಿತಾದ ಟ್ವೀಟ್ ಒಂದನ್ನು ರಾಹುಲ್ ಗಾಂಧಿ ರಿಟ್ವೀಟ್ ಮಾಡಿದ್ದು, ಮೀನು ಹಿಡಿಯುವ ಬಲೆ ಕಟ್ಟಿ ಭರತ್ ಸಿಂಗ್ ಎಂಬ 16 ವರ್ಷದ ಬಾಲಕನೊಬ್ಬ ಕ್ರಿಕೆಟ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿರುವುದು ಇದರಲ್ಲಿನ ವಿಡಿಯೋದಲ್ಲಿ ಕಾಣಿಸುತ್ತದೆ.
"ನಮ್ಮ ದೇಶದ ಮೂಲೆಮೂಲೆಗಳಲ್ಲೂ ಅದ್ಭುತ ಪ್ರತಿಭೆಗಳು ಅಡಗಿವೆ. ಆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಬಾಲಕನ ಕನಸು ಸಾಕಾರಗೊಳಿಸಲು ದಯವಿಟ್ಟು ಸಹಾಯ ಮಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನಾನು ಮನವಿ ಮಾಡುತ್ತೇನೆ" ಎಂದು ರಾಹುಲ್ ಗಾಂಧಿ ರಿಟ್ವೀಟ್ ಗೆ ಕ್ಯಾಪ್ಷನ್ ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಗೆಹ್ಲೋಟ್, ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಖಂಡಿತವಾಗಿಯೂ ಇದರ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.