ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ 13 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ತಮ್ಮ ಲಗೇಜ್ ಸಮೇತ ಕುಳಿತಿದ್ದವರನ್ನು ಯೋಧರು ಬಲವಂತವಾಗಿ ಎಳೆದಾಡುತ್ತಿರುವ, ಸ್ಥಳದಿಂದ ತೆರವು ಮಾಡುತ್ತಿರುವುದು ಕಾಣುತ್ತದೆ. 'ನೋಡಿ, ಅವರು ಹುಡುಗಿಯರನ್ನು ಹೇಗೆ ಥಳಿಸುತ್ತಿದ್ದಾರೆ' ಎಂದು ಒಬ್ಬ ವ್ಯಕ್ತಿ ಹೇಳುವುದು ಕೇಳಿಸುತ್ತದೆ. ಈ ಘಟನೆ ಪೊಲೆಂಡ್, ರೊಮೇನಿಯಾ ಗಡಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಈ ರೀತಿಯ ಹಿಂಸಾಚಾರವನ್ನು ಅನುಭವಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಈ ವಿಡಿಯೊಗಳನ್ನು ವೀಕ್ಷಿಸುತ್ತಿರುವುದು ನೋವಿನ ಸಂಗತಿ ಎಂದು ರಾಹುಲ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈವರೆಗೆ ಸಿಕ್ಕವರ ಮಾಹಿತಿ ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಯೋಜನೆಯ ವಿವರಗಳನ್ನು ಅವರ ಕುಟುಂಬಗಳೊಂದಿಗೆ ಹಂಚಿಕೊಳ್ಳಿ ಎಂದು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ರಷ್ಯಾ ಕಳೆದ ನಾಲ್ಕು ದಿನಗಳಿಂದ ಪೂರ್ಣ ಪ್ರಮಾಣದ ಯುದ್ಧ ಮಾಡುತ್ತಿರುವುದರಿಂದ ಸಾವಿರಾರು ಜನರು ಉಕ್ರೇನ್ ತೊರೆದಿದ್ದಾರೆ. 350ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆಡಳಿತ ತಿಳಿಸಿದೆ.
ಇದನ್ನೂ ಓದಿ:14 ಮಕ್ಕಳು ಸೇರಿ 352 ಮಂದಿ ಸಾವು ಎಂದ ಉಕ್ರೇನ್; ಮೊದಲ ಬಾರಿಗೆ ಪ್ರಾಣಹಾನಿ ಒಪ್ಪಿಕೊಂಡ ರಷ್ಯಾ