ನವದೆಹಲಿ:ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಆಡಳಿತ ಪಕ್ಷ ದೇಶದ ಮಾನ ಹರಾಜು ಹಾಕಿದೆ. ನೀವು ದೇಶದ್ರೋಹಿಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.
ಅವಿಶ್ವಾಸ ಗೊತ್ತುವಳಿ ಮೇಲೆ ಮಾತನಾಡಿದ ರಾಹುಲ್ ಗಾಂಧಿ, ರಾಮಾಯಣದ ಉದಾಹರಣೆ ನೀಡುತ್ತಾ ವಾಗ್ದಾಳಿ ನಡೆಸಿದರು. ರಾವಣ ಹಿಂದೆ ಇಬ್ಬರ ಮಾತನ್ನ ಮಾತ್ರ ಕೇಳುತ್ತಿದ್ದರು. ಅದು ಮೇಘನಾಥ ಮತ್ತು ಕುಂಭಕರ್ಣ. ಹಾಗೆಯೇ ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ, ಅದಾನಿ ಅವರ ಮಾತನ್ನ ಮಾತ್ರ ಕೇಳುತ್ತಿದ್ದಾರೆ. ರಾವಣನನ್ನು ಕೊಂದಿದ್ದು ರಾಮ ಮಾತ್ರವಲ್ಲ, ಆತನ ಅಹಂಕಾರ ಎಂದು ಟೀಕಾ ಪ್ರಹಾರ ನಡೆಸಿದರು.
ಜನರ ಧ್ವನಿಯೇ ಭಾರತವಾಗಿದೆ. ಬಿಜೆಪಿಯವರು ಮಣಿಪುರದಲ್ಲಿ ಭಾರತ ಮಾತೆಯನ್ನುಕೊಂದಿದ್ದೀರಿ. ನೀವು ಭಾರತ ಮಾತೆಯ ರಕ್ಷಕರಲ್ಲ, ಕೊಲೆಗಡುಕರು. ನಾನು ಪ್ರೀತಿಯಿಂದ ಮಾತನಾಡಿದರೆ, ನೀವು ಹಿಂಸೆಯನ್ನು ಪ್ರಚೋದಿಸುತ್ತಿದ್ದೀರಿ. ನೀವು ನನ್ನ ತಾಯಿಯನ್ನು ಮಣಿಪುರದಲ್ಲಿ ಕೊಂದು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಯಿತು. ಆ ಬಳಿಕ ಮಾತು ಮುಂದುವರಿಸಿದ ರಾಹುಲ್, ಈಗ ನಾನು ಅದಾನಿ ಹೆಸರು ಬಳಸುವುದಿಲ್ಲ ಎಂದರು. ಅಷ್ಟೇ ಅಲ್ಲ ಅಹಂಕಾರದಿಂದ ಮಾತನಾಡುವುದಿಲ್ಲ, ಹೃದಯದಿಂದ ಮಾತನಾಡುತ್ತೇನೆ ಎಂದರು. ಇದೇ ವೇಳೆ, ಭಾರತ ಜೋಡೋ ಯಾತ್ರೆ ಬಗ್ಗೆ ಪ್ರಸ್ತಾಪಿಸಿದರು. ಜನರಿಂದ ಸಿಕ್ಕ ಅಭೂತ ಪೂರ್ವ ಸ್ವಾಗತವನ್ನು ನೆನಪಿಸಿಕೊಂಡರು.