ವಾಷಿಂಗ್ಟನ್:ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ತಮ್ಮ ಸಂಸತ್ ಸದಸ್ಯತ್ವ ರದ್ದು ವಿಚಾರವಾಗಿ ಗುರುವಾರ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಸಂಸತ್ತಿನಲ್ಲಿ ಅದಾನಿ-ಹಿಂಡನ್‌ಬರ್ಗ್ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಯಾಗಿ ನನಗೆ ಈ ಉಡುಗೊರೆ (ಶಿಕ್ಷೆ) ಸಿಕ್ಕಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಅತಿ ದೊಡ್ಡ ಶಿಕ್ಷೆಗೆ ಗುರಿಯಾದ ಭಾರತದ ಮೊದಲ ವ್ಯಕ್ತಿ ನಾನು ಎಂದು ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಸಂವಾದದಲ್ಲಿ ಹೇಳಿದರು. ಇದಕ್ಕೂ ಮುನ್ನ ಬುಧವಾರ (ಜೂ.1) ಕೂಡ ಸಂಸತ್ ಸದಸ್ಯತ್ವ ವಿಚಾರವಾಗಿ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ವಿರೋಧ ಪಕ್ಷಗಳ ಜೊತೆ ಸಂಪರ್ಕದಲ್ಲಿದೆ: 1947 ರಿಂದ ಈವೆರೆಗಿನ ಇತಿಹಾಸದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಅತಿ ಹೆಚ್ಚು ಶಿಕ್ಷೆ ಪಡೆದ ಭಾರತದ ಮೊದಲ ವ್ಯಕ್ತಿ ನಾನಾಗಿದ್ದೇನೆ. ಮೊದಲ ಅಪರಾಧಕ್ಕೆ ಯಾರಿಗೂ ಇಷ್ಟು ದೊಡ್ಡ ಪ್ರಮಾಣದ ಶಿಕ್ಷೆ ಆಗಿಲ್ಲ. ಇದರಿಂದ ನನಗೆ ಮುಂದೆ ಏನಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು. ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ತಮ್ಮ ಪಕ್ಷ ವಿರೋಧ ಪಕ್ಷಗಳ ಜೊತೆ ಸಂಪರ್ಕದಲ್ಲಿದೆ. ಎಲ್ಲ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.
'ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷ':ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಪಕ್ಷವಾಗಿದೆ. ಇದರಲ್ಲಿ ಜಾತ್ಯತೀತವಲ್ಲದ ಯಾವುದೇ ಅಂಶ ಇಲ್ಲ ಎಂದು ಹೇಳಿದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿದೆ.