ನವದೆಹಲಿ:ಜಾತಿ ಗಣತಿ ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ಅದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ ಮಾತನಾಡಿದ ರಾಹುಲ್, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಈ ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ನಡೆದ ಜಾತಿ ಗಣತಿ ವರದಿಯನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ಮತ್ತೆ ನಡೆಸಿ, ಅದರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಿಮೋಟ್ ಒತ್ತಿದರೆ, ಸಿರಿವಂತ ಉದ್ಯಮಿಗಳು, ಅದಾನಿಗೆ ವಿಮಾನ ನಿಲ್ದಾಣ, ಬಂದರು, ದೊಡ್ಡ ಯೋಜನೆಗಳಿಗೆ ಗುತ್ತಿಗೆ ಸಿಗುತ್ತದೆ. ಅದೇ ನಮ್ಮ ಪಕ್ಷ ಬಡವರ ಕಲ್ಯಾಣಕ್ಕಾಗಿ ಮಾತ್ರ ದುಡಿಯುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗಕ್ಕಿಲ್ಲ ಅವಕಾಶ:ಈಗಿನ ಸರ್ಕಾರವನ್ನು ಸಚಿವ ಸಂಪುಟ ಕಾರ್ಯದರ್ಶಿಗಳು, ಇತರ ಕಾರ್ಯದರ್ಶಿಗಳು ನಡೆಸುತ್ತಾರೆ. ಆದರೆ, ನಿಜವಾಗಿಯೂ ಸರ್ಕಾರದ ಭಾಗವಾಗಿರಬೇಕಾದವರು ಸಂಸದರು ಮತ್ತು ಸಚಿವರು. ಆದರೆ, ಇಲ್ಲಿ ಹಾಗಿಲ್ಲ. ಕೇಂದ್ರ ಸಚಿವಾಲಯಗಳಲ್ಲಿನ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದ ವರ್ಗದವರಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಕೇವಲ 5 ಪ್ರತಿಶತವನ್ನು ಮಾತ್ರ ಅವರು ಪ್ರತಿನಿಧಿಸುತ್ತಾರೆ. ಇಡೀ ದೇಶದಲ್ಲಿ ಕೇವಲ ಐದು ಪ್ರತಿಶತದಷ್ಟು ಮಾತ್ರ ಒಬಿಸಿಗಳು ಇದ್ದಾರೆಯೇ ಎಂದು ರಾಹುಲ್ ಪ್ರಶ್ನಿಸಿದರು.