ನವದೆಹಲಿ: ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡು ಸರ್ಕಾರಿ ಬಂಗಲೆ ತೊರೆದಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ನೂತನ ಮನೆ ದೊರೆತಿದೆ. ಇಲ್ಲಿನ ಆಗ್ನೇಯ ದೆಹಲಿಯ ಪೂರ್ವ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮನೆಗೆ ಶೀಘ್ರದಲ್ಲೇ 'ರಾಗಾ' ತಮ್ಮ ಕಚೇರಿ ಮತ್ತು ನಿವಾಸವನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ಈಗ ತೆರಳಲಿರುವ ಮನೆಗೆ ರಾಜಕೀಯ ಇತಿಹಾಸವೂ ಇದೆ.
ಮಾರ್ಚ್‌ನಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮ್ಮ 12ನೇ ತುಘಲಕ್ ಲೇನ್ ನಿವಾಸವನ್ನು ಏಪ್ರಿಲ್ನಲ್ಲಿ ತೆರವು ಮಾಡಿದ್ದರು. ನಂತರ ತಮ್ಮ ತಾಯಿ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ 10 ಜನಪಥ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಬೆನ್ನಲ್ಲೇ ನೂತನ ಮನೆಗೆ ಹುಡುಕಾಟ ನಡೆಸುತ್ತಿದ್ದರು. ಈ ಹಿಂದೆ ರಾಹುಲ್ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾಗ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಮನೆಗಳನ್ನು ಬಿಟ್ಟುಕೊಡಲು ಮುಂದಾಗಿದ್ದರು.
ಹೊಸ ಮನೆಯ ವಿಶೇಷತೆ : ದೆಹಲಿಯ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ಮನೆಯನ್ನು ರಾಹುಲ್ ಗಾಂಧಿ ಅವರು ತಮ್ಮ ಕಚೇರಿ ಮತ್ತು ನಿವಾಸವನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ, ಶೀಲಾ ದೀಕ್ಷಿತ್ ಅವರ ಈ ಖಾಸಗಿ ನಿವಾಸದಲ್ಲಿ ಅವರ ಪುತ್ರ ಮತ್ತು ಮಾಜಿ ಸಂಸದ ಸಂದೀಪ್ ದೀಕ್ಷಿತ್ ವಾಸಿಸುತ್ತಿದ್ದರು. ಆದರೆ, ಅವರು ಈಗ ಅದೇ ಪ್ರದೇಶದಲ್ಲಿರುವ ತಮ್ಮ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿ ಶೀಘ್ರದಲ್ಲೇ ನಿಜಾಮುದ್ದೀನ್ ಪೂರ್ವದ ಮನೆ ಸಂಖ್ಯೆ ಬಿ-2 ಗೆ ಸ್ಥಳಾಂತರವಾಗಬಹುದು ಎಂದು ಮೂಲಗಳು ಹೇಳುತ್ತಿವೆ. ಶೀಲಾ ದೀಕ್ಷಿತ್ ಅವರು 1991 ರಿಂದ 1998 ರವರೆಗೆ ಈ ಮನೆಯಲ್ಲಿ ತಂಗಿದ್ದರು. ಬಳಿಕ, ಕೇರಳದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಸೆಪ್ಟೆಂಬರ್ 2014 ರಲ್ಲಿ ಮತ್ತೆ ಅದೇ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡರು.