ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ವಯನಾಡು ಸಂಸದ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡುವುದಕ್ಕಾಗಿ ದೆಹಲಿ ತಮ್ಮ ನಿವಾಸದಿಂದ ಪ್ರಯಾಣ ಬೆಳೆಸಿದ್ದಾರೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ಕೋರ್ಟ್ನ ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ ನೀಡಿದ ಬಳಿಕ, ರಾಹುಲ್ ಗಾಂಧಿ ಅವರಿಗೆ ಸಂಸದ ಸ್ಥಾನ ಮರಳಿ ಸಿಕ್ಕಿದೆ. ಹೀಗೆ ಸಂಸದ ಸ್ಥಾನಕ್ಕೆ ವಾಪಸ್ ಆದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಕೇರಳದ ತಮ್ಮ ಸ್ವ ಕ್ಷೇತ್ರ ವಯನಾಡಿಗೆ ಭೇಟಿ ನೀಡುತ್ತಿದ್ದಾರೆ.
ಮೋದಿ ಹೆಸರಿನ ಬಗ್ಗೆ ಟೀಕೆ ಕುರಿತಂತೆ ಎದುರಿಸುತ್ತಿದ್ದ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಆಗಸ್ಟ್ ನಾಲ್ಕರಂದು ತಡೆಯಾಜ್ಞೆ ನೀಡಿತ್ತು. ಆ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರ ಸಂಸದ ಸ್ಥಾನವನ್ನು ಮರಳಿ ನೀಡಿದ್ದರು. ನಂತರ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿ ಮಂಡನೆ ಪರವಾಗಿ ಅಬ್ಬರದ ಭಾಷಣವನ್ನು ಮಾಡಿದ್ದರು. ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಸಂಸತ್ ಅಧಿವೇಶನ ನಿನ್ನೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆ ರಾಹುಲ್ ಗಾಂಧಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಭಾರತ ಜೋಡೋ ಯಾತ್ರೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರ ವಯನಾಡು ಪ್ರವಾಸ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.