ಹೈದರಾಬಾದ್:ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಕರಣ ಇದೇ ಮೊದಲಲ್ಲ. ಇದುವರೆಗೆ ಶಾಸಕರು ಮತ್ತು ಸಂಸದರನ್ನು ವಿವಿಧ ಸಂದರ್ಭಗಳಲ್ಲಿ ವಿಧಾನಸಭೆಗಳು ಮತ್ತು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಯನ್ನು ಅಪರಾಧ ಪ್ರಕಟವಾದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಅಲ್ಲದೇ, ನಂತರದ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಸಹ ಅನರ್ಹನಾಗಿರುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಸಭೆಯ ಒಬ್ಬರು ಸೇರಿದಂತೆ ನಾಲ್ವರು ಸಂಸದರು ಮತ್ತು 26 ಶಾಸಕರನ್ನು ಅನರ್ಹಗೊಳಿಸಲಾಗಿದೆ.
ಎ.ರಾಜಾ: ಕೇರಳದ ಸಿಪಿಎಂ ಶಾಸಕರಾದ ಎ.ರಾಜಾ ಅವರನ್ನು ಚುನಾವಣಾ ವಂಚನೆ ಪ್ರಕರಣದಲ್ಲಿ ಅನರ್ಹಗೊಳಿಸಲಾಗಿತ್ತು. ಇಡುಕ್ಕಿ ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರವಾದ ದೇವಿಕುಲಂನಿಂದ ಆಯ್ಕೆಯಾಗಿದ್ದ ರಾಜಾ ಅವರನ್ನು ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿತ್ತು. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪದ ಮೇಲೆ ರಾಜಾ ಶಿಕ್ಷೆಗೆ ಒಳಗಾಗಿದ್ದರು.
ಲಾಲು ಪ್ರಸಾದ್ ಯಾದವ್: ಮೇವು ಹಗರಣದ ಪ್ರಕರಣದಲ್ಲಿ 2013ರ ಸೆಪ್ಟೆಂಬರ್ನಲ್ಲಿ ಶಿಕ್ಷೆಗೊಳಗಾದ ಕಾರಣ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಲಾಲು ಬಿಹಾರದ ಸರನ್‌ನಿಂದ ಸಂಸದರಾಗಿದ್ದರು.
ಅನಿಲ್ ಕುಮಾರ್ ಸಾಹ್ನಿ: ವಂಚನೆ ಆರೋಪದಲ್ಲಿ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಾಹ್ನಿ ಅವರು ಮೂರು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದಾಗ ಅನಿಲ್ ಕುಮಾರ್ ಸಾಹ್ನಿ ನಕಲಿ ಬಿಲ್‌ಗಳ ಮೇಲೆ ಎಲ್‌ಟಿಸಿ ಕ್ಲೈಮ್ ಮಾಡಿದ ಆರೋಪ ಇತ್ತು. ಇದರ ತೀರ್ಪು ಪ್ರಕಟಗೊಂಡಾಗ ಶಾಸಕರಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಶಾಸಕಾಂಗ ಸಭೆಯಿಂದ ಅನರ್ಹಗೊಳಿಸಲಾಗಿತ್ತು.
ಅನಂತ್ ಕುಮಾರ್ ಸಿಂಗ್:ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ ಆರೋಪದ ಮೇಲೆ ಬಿಹಾರದ ಆರ್‌ಜೆಡಿ ಶಾಸಕ ಅನಂತ್ ಕುಮಾರ್ ಸಿಂಗ್ ಅವರನ್ನು ಅನರ್ಹಗೊಳಿಸಲಾಗಿದೆ. 2019ರಲ್ಲಿ ಪಾಟ್ನಾ ಜಿಲ್ಲೆಯ ಬಾರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯ ನಡ್ವಾ ಗ್ರಾಮದ ಅನಂತ್ ಕುಮಾರ್ ಸಿಂಗ್ ನಿವಾಸದಲ್ಲಿ ಎಕೆ-47 ರೈಫಲ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಜೆ ಜಯಲಲಿತಾ:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕಾರಣ ಎಐಎಡಿಎಂಕೆ ಅಧಿನಾಯಕಿ ಜೆ ಜಯಲಲಿತಾ ಅವರನ್ನು 2014ರಲ್ಲಿ ತಮಿಳುನಾಡು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದರು. ಅನರ್ಹತೆ ಕಾರಣ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.