ಪುಣೆ(ಮಹಾರಾಷ್ಟ್ರ):''ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹೋರಾಟಗಾರ. ಚುನಾವಣಾ ಆಯೋಗಕ್ಕೆ ಗೌರವಯುತ ಮತ್ತು ಪ್ರಾಮಾಣಿಕ ಉತ್ತರವನ್ನು ಅವರು ನೀಡಲಿದ್ದಾರೆ'' ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯೆ ನೀಡಿದರು.
ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರ "ಜೇಬ್‌ಕತ್ರ" (ಪಿಕ್‌ಪಾಕೆಟ್), "ಪನೌಟಿ" ಹಾಗೂ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಆಯೋಗವು ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಶನಿವಾರ (ನವೆಂಬರ್ 25) ಸಂಜೆಯೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಸುಪ್ರಿಯಾ ಸುಳೆ, "ರಾಹುಲ್ ಗಾಂಧಿ ಪ್ರಬಲ, ಪ್ರಾಮಾಣಿಕ ಹಾಗೂ ಧೈರ್ಯಶಾಲಿ ನಾಯಕ. ಅವರು ಗೌರಯುತ ಮತ್ತು ಪ್ರಾಮಾಣಿಕ ಉತ್ತರವನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ" ಎಂದರು.
''ಜಾರಿ ನಿರ್ದೇಶನಾಲಯದ (ಇಡಿ) ನೋಟಿಸ್ ಪಡೆದಿರುವ ಶೇ.95ರಷ್ಟು ಮಂದಿ ವಿರೋಧ ಪಕ್ಷದವರಾಗಿದ್ದಾರೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 3 ಕಾಂಗ್ರೆಸ್ ಮತ್ತು ಭಾರತಕ್ಕೆ ಒಳ್ಳೆಯ ದಿನ ಆಗಲಿದೆ'' ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಯಾರಿಗೂ ಹೆದರುವುದಿಲ್ಲ-ಸುಪ್ರಿಯಾ ಸುಳೆ:''ರಾಹುಲ್ ಒಬ್ಬ ಯೋಧ. ಅವರು ಧೈರ್ಯದಿಂದ ಹೋರಾಡುತ್ತಾರೆ. ಯಾರಿಗೂ ಹೆದರುವುದಿಲ್ಲ ಎಂಬ ನಂಬಿಕ ನನಗಿದೆ. ಬಿಜೆಪಿಯವರು ಗಾಂಧಿ ಕುಟುಂಬದ ಬಗ್ಗೆ ಮಾತನಾಡಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಬಿಜೆಪಿ ಕಾಂಗ್ರೆಸ್ನ ಹಲವು ಹಿರಿಯರ ಬಗ್ಗೆಯೂ ಕಾಮೆಂಟ್ ಮಾಡಿತ್ತು. ಮುಂದಿನ ಐದು ವರ್ಷಗಳ ಕಾಲ ಯಾವ ಪಕ್ಷದ ಸರ್ಕಾರ ಬೇಕು ಎಂಬುದನ್ನು ರಾಜಸ್ಥಾನದ ಮತದಾರರು ನಿರ್ಧರಿಸುತ್ತಾರೆ'' ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಕಾರ್ಯಾಧ್ಯಕ್ಷೆಯೂ ಆಗಿರುವ ಸುಳೆ ಕಿಡಿಕಾರಿದರು.
ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು:ಬಿಜೆಪಿ ತನ್ನ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. "ಈ ರೀತಿಯ ಹೇಳಿಕೆಗಳು ಚುನಾವಣಾ ವಾತಾವರಣವನ್ನು ಸಂಪೂರ್ಣ ಹಾಳು ಮಾಡುತ್ತವೆ. ಚುನಾವಣೆ ಪ್ರಚಾರದ ವೇಳೆಯಲ್ಲಿ ನಿಂದನೆ, ಗೌರವಾನ್ವಿತ ವ್ಯಕ್ತಿಗಳನ್ನು ಮಾನನಷ್ಟಗೊಳಿಸಲು ಆಕ್ಷೇಪಾರ್ಹ ಭಾಷೆಯ ಬಳಕೆ ಮತ್ತು ಸುಳ್ಳು ವಿಚಾರಗಳನ್ನು ಹರಡುವುದು ಸರಿಯಲ್ಲ" ಎಂದು ತಿಳಿಸಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಓರ್ವ ನಟ; ಚುನಾವಣೆಯ ನಂತರ ಬಿಜೆಪಿಯವರಿಗೆ ಮುಖ ತೋರಿಸಲು ಆಗಲ್ಲ-ಗೆಹ್ಲೋಟ್