ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಜನನಿಬಿಡ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಕೂಲಿಗಳ ಕೆಂಪು ಶರ್ಟ್ ಧರಿಸಿ ತಲೆ ಮೇಲೆ ಸೂಟ್ಕೇಸ್ ಹೊತ್ತುಕೊಂಡು ರಾಹುಲ್ ಗಾಂಧಿ ಹಮಾಲರ ಶ್ರಮ ಹಾಗೂ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ರೈಲು ನಿಲ್ದಾಣಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ತೆರಳಿ ಸಂವಾದ ನಡೆಸಿರುವ ವಿಡಿಯೋ ತುಣುಕುಗಳನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಗಮನ ಸೆಳೆಯುವ ಹಲವು ವಿಡಿಯೋಗಳು ವೈರಲ್ ಆಗಿವೆ. ರೈಲು ನಿಲ್ದಾಣದ ಕೂಲಿಗಳ ಸಮಸ್ಯೆಗಳ ಆಲಿಸಲು ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ಕಾರ್ಮಿಕರು ಆತ್ಮೀಯವಾಗಿ ಸ್ವಾಗತಿಸಿದರು.
ಕೆಂಪು ಅಂಗಿ ತೊಟ್ಟು ತಲೆಯ ಮೇಲೆ ಟ್ರಾಲಿ ಬ್ಯಾಗ್ ಹೊತ್ತ ಸ್ವಲ್ಪ ದೂರ ಸಾಗಿಸಿದ ರಾಹುಲ್ ಅವರನ್ನು ಹಲವು ಹಮಾಲರು ಸುತ್ತುವರೆದಿದ್ದರು. ಈ ವೇಳೆ, ರಾಹುಲ್ ಗಾಂಧಿ ಜಿಂದಾಬಾದ್ ಎಂಬ ಘೋಷಣೆಗಳು ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ರಾಹುಲ್ ಕೂಲಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂವಾದ ನಡೆಸಿದರು. ಕೂಲಿಗಳ ಗುಂಪಿನಲ್ಲಿ ಕುಳಿತು ಸಮಚಿತ್ತದಿಂದ ಸಮಸ್ಯೆಗಳನ್ನು ಆಲಿಸಿದರು. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರನ್ನು ಜನನಾಯಕ ಎಂದು ಬಣ್ಣಿಸಿದೆ. ಶ್ರಮಿಕ ವರ್ಗದ ಹಮಾಲಿಗಳ ಕಷ್ಟಗಳಿಗೆ ಕಿವಿಗೊಡಲು ರಾಹುಲ್ ಇದ್ದಾರೆ ಎಂದೂ ಒತ್ತಿ ಹೇಳಿದೆ.