ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮೂರು ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ನೀಡುವುದಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ನೀಡಲು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಜೂರು ಮಾಡಿದೆ. ಎನ್‌ಒಸಿ ನೀಡಲು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನೂ ಒಪ್ಪಿಸಿದ್ದರು. ಹೀಗಾಗಿ ಸಾಮಾನ್ಯ ಪಾಸ್ಪೋರ್ಟ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ, ''ನಾವು ನಿಮ್ಮ ಅರ್ಜಿಯನ್ನು ಭಾಗಶಃ ಅನುಮತಿಸುತ್ತಿದ್ದೇವೆ. ಆದರೆ, 10 ವರ್ಷಗಳಲ್ಲ ಅವಧಿಗೆ ಅಲ್ಲ ಬದಲಿಗೆ ಮೂರು ವರ್ಷಕ್ಕೆ ಮಾತ್ರ'' ಎಂದು ರಾಹುಲ್ ಗಾಂಧಿ ಪರ ವಕೀಲರಿಗೆ ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಆರೋಪಿಯಾಗಿದ್ದು, ಈ ಪ್ರಕರಣದ ದೂರುದಾರರಾದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಪಾಸ್ಪೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ನ್ಯಾಷನಲ್ ಹೆರಾಲ್ಡ್ ಪ್ರಕರಣವು ದೂರುದಾರರ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ ಬಾಕಿ ಉಳಿದಿದೆ. ಅಲ್ಲದೇ, ರಾಹುಲ್ ಗಾಂಧಿಯವರು ನಿಯಮಿತವಾಗಿ ವೈಯಕ್ತಿಕ ಅಥವಾ ಅವರ ವಕೀಲರ ಮೂಲಕ ಹಾಜರಾಗುತ್ತಿದ್ದಾರೆ. ಆದ್ದರಿಂದ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಅಥವಾ ವಿಳಂಬ ಆಗಲ್ಲ ಎಂಬುವುದನ್ನು ಗಮನಿಸಿತು.
ಮುಂದುವರೆದು, ''ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ವಿದೇಶಕ್ಕೆ ಪ್ರಯಾಣಿಸಲು ಅರ್ಜಿದಾರರ ಹಕ್ಕುಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಎರಡೂ ಕಡೆಯ ಅರ್ಜಿಗಳು ಮತ್ತು ದಾಖಲೆಯ ಪರಿಶೀಲನೆಯ ನಂತರ ತೀರ್ಮಾನದ ದೃಷ್ಟಿಕೋನವನ್ನು ಹೊಂದಲಾಗಿದೆ. ಮೂರು ವರ್ಷಗಳ ಅವಧಿಗೆ ನಿಯಮಗಳ ಪ್ರಕಾರ ಅರ್ಜಿದಾರರ ಪಾಸ್ಪೋರ್ಟ್ಅನ್ನು ನವೀಕರಿಸಲು ಎನ್‌ಒಸಿ ನೀಡಿದರೆ ಸಾಕು'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.