ಐಜ್ವಾಲ್ (ಮಿಜೋರಾಂ): "ನಮ್ಮ ದೇಶದ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್ ದೃಷ್ಟಿಕೋನ ನಮಗಿಂತ ಭಿನ್ನವಾಗಿದೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಮಿಜೋರಾಂ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಐಜ್ವಾಲ್‌ನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟವು ದೇಶದ ಶೇಕಡಾ 60 ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ, ಇದು ಬಿಜೆಪಿಗಿಂತ ಹೆಚ್ಚು" ಎಂದರು.
ನಾವು ವಿಕೇಂದ್ರೀಕರಣ ನಂಬುತ್ತೇವೆ:"ಪ್ರತಿಪಕ್ಷಗಳ ಮೈತ್ರಿಕೂಟವು ತನ್ನ ಮೌಲ್ಯಗಳು, ಸಂವಿಧಾನಿಕ ಚೌಕಟ್ಟು ಮತ್ತು ಧರ್ಮ ಹಾಗೂ ಸಂಸ್ಕೃತಿಯನ್ನು ಪರಿಗಣಿಸದೇ ಜನರು ಸಾಮರಸ್ಯದಿಂದ ಬದುಕಲು ಸ್ವಾತಂತ್ರ್ಯವನ್ನು ರಕ್ಷಿಸುವ ಮೂಲಕ ಭಾರತದ ಕಲ್ಪನೆಯನ್ನು ರಕ್ಷಿಸುತ್ತಿದೆ" ಎಂದು ಹೇಳಿದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ, "ನಮ್ಮ ರಾಷ್ಟ್ರದ ಬಗ್ಗೆ ಅವರ ದೃಷ್ಟಿ ನಮಗಿಂತ ಭಿನ್ನವಾಗಿದೆ. ಭಾರತವು ಒಂದೇ ಸಿದ್ಧಾಂತ ಮತ್ತು ಸಂಘಟನೆಯಿಂದ ಆಡಳಿತ ನಡೆಸಬೇಕು ಎಂದು ಆರ್‌ಎಸ್‌ಎಸ್ ನಂಬುತ್ತದೆ. ಅದನ್ನು ನಾವು ವಿರೋಧಿಸುತ್ತೇವೆ. ನಾವು ವಿಕೇಂದ್ರೀಕರಣವನ್ನು ನಂಬುತ್ತೇವೆ. ಎಲ್ಲಾ ನಿರ್ಧಾರಗಳನ್ನು ದೆಹಲಿಯಲ್ಲೇ ತೆಗೆದುಕೊಳ್ಳಬೇಕು ಎಂಬುದು ಬಿಜೆಪಿ ನಡೆ" ಎಂದು ಟೀಕಿಸಿದರು.
"ದೇಶಕ್ಕೆ ಅಡಿಪಾಯ ಹಾಕಲು ಕಾಂಗ್ರೆಸ್ ಸಹಾಯ ಮಾಡಿದೆ. ಆ ಅಡಿಪಾಯವನ್ನು ರಕ್ಷಿಸಿದ ದಾಖಲೆ ಹಳೆಯ ಪಕ್ಷಕ್ಕಿದೆ" ಎಂದು ಪ್ರತಿಪಾದಿಸಿದ ಅವರು, "ಬಿಜೆಪಿ ರಾಷ್ಟ್ರದ ಸಂಪೂರ್ಣ ಸಾಂಸ್ಥಿಕ ಚೌಕಟ್ಟನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ" ಎಂದು ದೂರಿದರು. "ಈಶಾನ್ಯದ ವಿವಿಧ ರಾಜ್ಯಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ದಾಳಿಗಳನ್ನು ಎದುರಿಸುತ್ತಿವೆ, ನಿಮ್ಮ ಧಾರ್ಮಿಕ ನಂಬಿಕೆಗಳ ಅಡಿಪಾಯಕ್ಕೆ ಬೆದರಿಕೆ ಹಾಕುತ್ತಿವೆ" ಎಂದು ಹೇಳಿದರು.
ಮಿಜೋರಾಂ- ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನಿನ್ನೆ (ಸೋಮವಾರ) ಕಾಂಗ್ರೆಸ್ ಪಕ್ಷ 39 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಪಕ್ಷದ ರಾಜ್ಯಾಧ್ಯಕ್ಷ ಲಾಲ್ಸಾವ್ತಾ ಅವರನ್ನು ಐಜ್ವಾಲ್ ವೆಸ್ಟ್-3 ರಿಂದ ಕಣಕ್ಕಿಳಿಸಲಾಗಿದೆ. ಲಾಲ್ನುನ್ಮಾವಿಯಾ ಚುವಾಂಗೊ ಅವರು ಐಜ್ವಾಲ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವು 26 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಝೋರಂತಂಗ ಹಾಲಿ ಸಿಎಂ ಆಗಿದ್ದಾರೆ. ಕಾಂಗ್ರೆಸ್ 5 ಸೀಟುಗಳನ್ನು ಹಾಗೂ ಬಿಜೆಪಿ ಕೇವಲ 1 ಸ್ಥಾನ ಪಡೆದುಕೊಂಡಿತ್ತು. 40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಚಿಕ್ಕ ರಾಜ್ಯ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ:'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಖರ್ಗೆ ಅಥವಾ ರಾಹುಲ್ ಪ್ರಧಾನಿ ಸಾಧ್ಯತೆ: ಶಶಿ ತರೂರ್